ಮುಹಮ್ಮದ್ ಇಶಾಕ್ ದರ್
ಕೃಪೆ: ರಾಯಿಟರ್ಸ್
ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಸೇರಿದಂತೆ ಬಾಕಿ ಇರುವ ಎಲ್ಲ ವಿಚಾರಗಳ ಬಗ್ಗೆ ಭಾರತದೊಂದಿಗೆ ಸಮಗ್ರವಾಗಿ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಮುಹಮ್ಮದ್ ಇಶಾಕ್ ದರ್ ಶುಕ್ರವಾರ ಹೇಳಿದ್ದಾರೆ.
ಭಾರತದೊಂದಿಗಿನ ಮಾತುಕತೆ ಕುರಿತು ಸಂಸತ್ತಿನ ಹೊರಗೆ ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ದರ್, 'ಮಾತುಕತೆ ಯಾವಾಗ ನಡೆದರೂ, ಅದು ಕಾಶ್ಮೀರ ಸಮಸ್ಯೆ ಮಾತ್ರವಲ್ಲ, ಎಲ್ಲ ವಿಚಾರಗಳನ್ನೂ ಒಳಗೊಂಡಿರಲಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಇತ್ತೀಚೆಗೆ ನಡೆಸಿದ ಗುಂಡಿನ ದಾಳಿ ಬಳಿಕ ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ, ನೆರೆ ರಾಷ್ಟ್ರದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆ ಕುರಿತಷ್ಟೇ ಚರ್ಚಿಸಲಾಗುವುದು ಎಂದು ಭಾರತ ಸ್ಪಷ್ಟವಾಗಿ ಹೇಳಿದೆ.
ಆದಾಗ್ಯೂ ದರ್ ಅವರು, ಭಾರತದೊಂದಿಗೆ ಒಂದು ಅಂಶದ ಕಾರ್ಯಸೂಚಿಯೊಂದಿಗೆ ಮಾತುಕತೆಗೆ ಅವಕಾಶವಿಲ್ಲ ಎಂದು ಪಾಕಿಸ್ತಾನ ಆರಂಭದಿಂದಲೂ ಹೇಳುತ್ತಾ ಬಂದಿದೆ ಒತ್ತಿ ಹೇಳಿದ್ದಾರೆ.
ಮಧ್ಯಸ್ಥಿಕೆಗೆ ಮನವಿ ಮಾಡಿಲ್ಲ
ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಯಾರನ್ನೂ ಕೋರಿಲ್ಲ. ಆದರೆ, ತಟಸ್ಥ ಸ್ಥಳದಲ್ಲಿ ಮಾತುಕತೆಗೆ ಪ್ರಸ್ತಾಪಿಸಿದ್ದೇವೆ. 'ತಟಸ್ಥ ಸ್ಥಳದಲ್ಲಿ ಮಾತುಕತೆಗೆ ಸೇರಲು ನಮಗೆ ಹೇಳಲಾಗಿದೆ. ಆ ರೀತಿ ನಡೆಯುವುದಾದರೆ ಸಿದ್ಧವಿರುವುದಾಗಿ ತಿಳಿಸಿದ್ದೇವೆ' ಎಂದಿದ್ದಾರೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿ ವೇಳೆ 26 ಪ್ರವಾಸಿಗರು ಹತ್ಯೆಯಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿತ್ತು. ಆದರೆ, ಇದರ ವಿರುದ್ಧ ಪಾಕ್ ಸೇನೆ ಭಾರತದತ್ತ ದಾಳಿ ಮಾಡಿದ್ದರಿಂದ ಸಂಘರ್ಷ ಏರ್ಪಟ್ಟಿತ್ತು. ಬಳಿಕ ಮೇ 10ರಂದು ಕದನ ವಿರಾಮ ಏರ್ಪಟ್ಟಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅದನ್ನು ಘೋಷಿಸಿದ್ದರು.
ಸಂಘರ್ಷದ ವೇಳೆ, ಭಾರತದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕ ಕರೆ ನೀಡಿತ್ತು ಎಂದು ದರ್ ಹೇಳಿದ್ದಾರೆ.
ಪಾಕ್ ಉಪ ಪ್ರಧಾನಿಯೂ ಆಗಿರುವ ಅವರು, 'ಪಾಕಿಸ್ತಾನ ಯುದ್ಧವನ್ನು ಬಯಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ' ಎಂದೂ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.