ADVERTISEMENT

ಪಾಕಿಸ್ತಾನ | ಆರ್ಥಿಕ ಬಿಕ್ಕಟ್ಟಿಗೆ, ರಾಜಕಾರಣಿಗಳ ದೂಷಣೆ: ರಕ್ಷಣಾ ಸಚಿವ ಆಸಿಫ್

ಪಿಟಿಐ
Published 19 ಫೆಬ್ರುವರಿ 2023, 7:10 IST
Last Updated 19 ಫೆಬ್ರುವರಿ 2023, 7:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ದೇಶವು ಈಗಾಗಲೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಇದಕ್ಕೆ ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳನ್ನು ದೂಷಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ತಿಳಿಸಿದ್ದಾರೆ.

ಸಿಯಾಲ್‌ಕೋಟ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ಹಾಗೂ ಆರ್ಥಿಕ ಬಿಕ್ಕಟ್ಟನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಂವಿಧಾನವನ್ನು ಅನುಸರಿಸದಿರುವುದರ ಜತೆಗೆ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿಗೆ ಅಧಿಕಾರಶಾಹಿ ವರ್ಗ ಮತ್ತು ರಾಜಕಾರಣಿಗಳು ಸೇರಿದಂತೆ ಎಲ್ಲರೂ ಹೊಣೆಗಾರರು ಎಂದು ಅವರು ಹೇಳಿದ್ದಾರೆ.

ADVERTISEMENT

‘ಪಾಕಿಸ್ತಾನ ದಿವಾಳಿಯಾಗುತ್ತಿದೆ ಎಂದು ನೀವು ಕೇಳಿರಬೇಕು. ಆದರೆ ನಾವು ದಿವಾಳಿಯಾದ ದೇಶದಲ್ಲಿ ವಾಸಿಸುತ್ತಿದ್ದೇವೆಯೇ’ ಎಂದರಲ್ಲದೆ, ನಮ್ಮ ಸಮಸ್ಯೆಗಳಿಗೆ ಪರಿಹಾರವು ದೇಶದೊಳಗೆ ಇದೆ. ಪಾಕಿಸ್ತಾನದ ಸಮಸ್ಯೆಗಳಿಗೆ ಐಎಂಎಫ್‌ನಿಂದ ಪರಿಹಾರ ತೆಗೆದುಕೊಂಡಿಲ್ಲ ಎಂದು ಆಸಿಫ್ ತಿಳಿಸಿದ್ದಾರೆ.

ಕಳೆದ 32 ವರ್ಷಗಳಿಂದ ವಿರೋಧ ಪಕ್ಷಗಳ ಪಾಳೆಯದಲ್ಲಿಯೇ ಕಳೆದಿದ್ದೇನೆ, ರಾಜಕೀಯ ವಿಡಂಭನೆಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ಪಾಕಿಸ್ತಾನಕ್ಕೆ ಭಯೋತ್ಪಾದಕರನ್ನು ಕರೆತರಲಾಯಿತು. ಇದು ಅಂತಿಮವಾಗಿ ಪ್ರಸ್ತುತ ಭಯೋತ್ಪಾದನೆಯ ಅಲೆಗೆ ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಕರಾಚಿಯ ಪೊಲೀಸ್ ಕಚೇರಿ ಮೇಲೆ ನಡೆದ ದಾಳಿ ಕುರಿತು ಮಾತನಾಡಿದ ಅವರು, ಭದ್ರತಾ ಸಂಸ್ಥೆಗಳು ದಾಳಿಕೋರರ ವಿರುದ್ಧ ಧೈರ್ಯದಿಂದ ಹೋರಾಡಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.