ADVERTISEMENT

ಪಾಕಿಸ್ತಾನದಲ್ಲಿ ಪ್ರತಿ 2 ಗಂಟೆಗೊಂದು ಅತ್ಯಾಚಾರ: ಸಮೀಕ್ಷೆ

ಪಿಟಿಐ
Published 13 ಅಕ್ಟೋಬರ್ 2022, 11:17 IST
Last Updated 13 ಅಕ್ಟೋಬರ್ 2022, 11:17 IST
   

ಇಸ್ಲಾಮಾಬಾದ್‌: ಪ್ರತಿ 2 ಗಂಟೆಗೊಂದು ಮಹಿಳೆಯ ಅತ್ಯಾಚಾರ ನಡೆಯುತ್ತಿದ್ದು, ಮರ್ಯಾದಾ ಹತ್ಯೆ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿವೆ. ದೇಶವು ಮಹಿಳೆಯರಿಗೆ ಅಸುರಕ್ಷಿತವಾಗಿದೆ ಎಂಬ ಆತಂಕಕಾರಿ ಸಂಗತಿಯನ್ನು ಇತ್ತೀಚಿನ ಸಮೀಕ್ಷೆ ಬಹಿರಂಗಗೊಳಿಸಿದೆ.

ಪಾಕಿಸ್ತಾನದ ಸುದ್ದಿವಾಹಿನಿ ಸಮಾ ಟಿವಿಯ ತನಿಖಾ ಘಟಕವು ಈ ಸಮೀಕ್ಷಾ ವರದಿ ಪ್ರಕಟಿಸಿದೆ. ಪಂಜಾಬ್‌ ಪ್ರಾಂತ್ಯದ ಗೃಹ ಇಲಾಖೆ ಮತ್ತು ಮಾನವ ಹಕ್ಕುಗಳ ಸಚಿವಾಲಯದ ದಾಖಲೆ ಆಧರಿಸಿ ಸಮೀಕ್ಷೆ ಹೊರಬಂದಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣವು ಹೆಚ್ಚುತ್ತಿದ್ದು, ಶಿಕ್ಷೆ ಪ್ರಮಾಣ ಶೇ 0.2ಕ್ಕಿಂತ ಕಡಿಮೆ ಇದೆ ಎಂಬ ಅಂಶವು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

‘2017ರಿಂದ 2021ರವರೆಗೆ ದೇಶದಲ್ಲಿ 21,900 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಪ್ರತಿದಿನ ದೇಶದಲ್ಲಿ 12 ಮಹಿಳೆಯರ ಮೇಲೆ ಅತ್ಯಾಚಾರ ಎಸೆಗಲಾಗುತ್ತಿದೆ ಅಥವಾ ಪ್ರತಿ 2 ಗಂಟೆಗೊಂದು ಅತ್ಯಾಚಾರ ನಡೆಯುತ್ತಿದೆ’ ಎಂದು ಸಮೀಕ್ಷೆ ತಿಳಿಸಿದೆ.

ADVERTISEMENT

ಸಾಮಾಜಿಕ ಕಳಂಕ ಮತ್ತು ಪ್ರತೀಕಾರದ ಹಿಂಸೆ ಭಯದಿಂದ ಹಲವು ಪ್ರಕರಣಗಳು ಬೆಳಕಿಗೆ ಬರದಿರಬಹುದು. ಹೀಗಾಗಿ ವರದಿಯಾಗದೆ ಇರುವ ಪ್ರಕರಣಗಳ ಸಂಖ್ಯೆ ವರದಿಯಾಗಿರುವುದಕ್ಕಿಂತ ಹೆಚ್ಚಿರಬಹುದು ಎಂಬ ಆತಂಕವನ್ನು ಸಮೀಕ್ಷೆ ವ್ಯಕ್ತಪಡಿಸಿದೆ.

ಕಳವಳಕಾರಿ ಸಂಗತಿ ಎಂಬಂತೆ ದಾಖಲಾದ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣ ಕೂಡ ಕಡಿಮೆ ಇದೆ. ಪಾಕಿಸ್ತಾನದ 44 ನ್ಯಾಯಾಲಯಗಳಲ್ಲಿ 1301 ಅತ್ಯಾಚಾರ ಪ್ರಕರಣಗಳು ಕೇಳಿಬಂದಿವೆ. 2856 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಆದರೆ ಕೇವಲ ಶೇ.4ರಷ್ಟು ಪ್ರಕರಣಗಳು ಮಾತ್ರ ವಿಚಾರಣೆಗೆ ಬಂದಿವೆ ಎಂದು ವರದಿ ತಿಳಿಸಿದೆ.

ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ ಕಳೆದ 4 ವರ್ಷಗಳಲ್ಲಿ 1957 ಮರ್ಯಾದಾ ಹತ್ಯಾ ಪ್ರಕರಣಗಳು ದಾಖಲಾಗಿವೆ. 10 ಲಕ್ಷ ಮಹಿಳೆಯರಲ್ಲಿ 15 ಜನ ಮರ್ಯಾದ ಹತ್ಯೆಗೆ ಒಳಗಾಗುತ್ತಿದ್ದು, ಇದೊಂದು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಅಪರಾಧ ಎಂಬ ಆತಂಕವನ್ನು ವರದಿ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.