
ರಿಯಾದ್: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ರಕ್ಷಣಾ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿವೆ. ‘ಉಭಯ ದೇಶಗಳಲ್ಲಿ ಯಾರ ವಿರುದ್ಧ ದಾಳಿ ನಡೆದರೂ ಅದನ್ನು ಎರಡೂ ದೇಶಗಳ ಮೇಲೆ ನಡೆದ ದಾಳಿ ಎಂದೇ ಪರಿಗಣಿಸಿ ಒಟ್ಟಾಗಿ ಪ್ರತಿರೋಧಿಸಲಾಗುವುದು’ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.
ನೆರೆಯ ಕತಾರ್‌ನಲ್ಲಿ ಹಮಾಸ್ ಮುಖಂಡರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಈ ಒಪ್ಪಂದಕ್ಕೆ ಬಂದಿವೆ. ಕೊಲ್ಲಿ ರಾಷ್ಟ್ರಗಳು ದೀರ್ಘಕಾಲದಿಂದ ಭದ್ರತೆಗಾಗಿ ಅಮೆರಿಕವನ್ನು ಅವಲಂಬಿಸಿದ್ದು, ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಈ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದೇ ಹೇಳಲಾಗುತ್ತಿದೆ.
ಸೌದಿ ಅರೇಬಿಯಾದ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದರು. ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರ ಬಲಪಡಿಸುವುದು ಮತ್ತು ಯಾರ ಮೇಲೆ ದಾಳಿ ನಡೆದರೂ ಅದನ್ನು ಜಂಟಿಯಾಗಿ ತಡೆಯುವುದು ಈ ರಕ್ಷಣಾ ಕಾರ್ಯತಂತ್ರದ ಪ್ರಮುಖ ಅಂಶಗಳಾಗಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೇ 7ರಿಂದ 10ರವರೆಗೆ ಭಾರತ–ಪಾಕ್ ನಡುವೆ ನಾಲ್ಕು ದಿನ ಸೇನಾ ಸಂಘರ್ಷ ನಡೆದಿತ್ತು. ಈ ಸಂದರ್ಭದಲ್ಲಿ ಅಣ್ವಸ್ತ್ರ ದಾಳಿಯ ಬಗ್ಗೆ ಚರ್ಚೆಗಳು ನಡೆದಿದ್ದವು. ಭಾರತ –ಪಾಕ್ ಸಂಘರ್ಷ ನಿಲ್ಲಿಸಿದ್ದು ತಾವು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಸೌದಿ ಅರೇಬಿಯಾವೂ ಸೇನಾ ಸಂಘರ್ಷ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ಹೇಳಿಕೊಂಡಿತ್ತು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶದಂತೆ ಸೌದಿ ಅರೇಬಿಯಾವು ಭಾರತಕ್ಕೆ ಮೂರನೆಯ ಅತಿ ದೊಡ್ಡ ಪೆಟ್ರೋಲಿಯಂ ಪೂರೈಕೆದಾರ ದೇಶವಾಗಿದೆ. ಸೌದಿ ಅರೇಬಿಯಾದೊಂದಿಗೆ ಪಾಕಿಸ್ತಾನವು ದಶಕಗಳಿಂದ ನಿಕಟ ಸಂಬಂಧ ಹೊಂದಿದೆ. 25 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಯರು ಕೆಲಸದ ನಿಮಿತ್ತ ಸೌದಿ ಅರೇಬಿಯಾದಲ್ಲಿ ನೆಲಸಿದ್ದಾರೆ.
ರಾಜತಾಂತ್ರಿಕ ನೀತಿಯ ವೈಫಲ್ಯ: ಕಾಂಗ್ರೆಸ್
‘ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ‘ರಕ್ಷಣಾ ಕಾರ್ಯತಂತ್ರ’ವು ಭಾರತದ ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಇದು ಬಿಜೆಪಿ ಸರ್ಕಾರದ ರಾಜತಾಂತ್ರಿಕ ನೀತಿಯ ವೈಫಲ್ಯ’ ಎಂದು ಕಾಂಗ್ರೆಸ್ ಟೀಕಿಸಿದೆ.
‘ಪ್ರಧಾನಿ ಮೋದಿ ಅವರ ‘ವೈಯಕ್ತಿಕ ವರ್ಚಸ್ಸಿನ ರಾಜನೀತಿ’ಗೆ ಆಗಿರುವ ಹಿನ್ನಡೆ ಇದು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ದಿಢೀರ್ ನಿಲ್ಲಿಸಲಾಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಔತಣಕೂಟ ಆಯೋಜಿಸಿ, ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಹೇಳಿದರು.
‘ನಮ್ಮ ಪ್ರಧಾನಿ ಚೀನಾ ಪ್ರವಾಸ ಮುಗಿಸಿ ಬಂದ ಕೆಲವು ದಿನಗಳಲ್ಲೇ, ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಚೀನಾದ ರಹಸ್ಯ ಸೇನಾ ಸಂಕೀರ್ಣವನ್ನು ತೆರೆದಿಟ್ಟರು. ಈಗ ಸೌದಿ ಅರೇಬಿಯಾವು ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದೆಲ್ಲವೂ ಬಿಜೆಪಿಯ ರಾಜತಾಂತ್ರಿಕ ನೀತಿಯ ವೈಫಲ್ಯ’ ಎಂದು ಜೈರಾಮ್ ಹೇಳಿದ್ದಾರೆ.
ಪಾಕಿಸ್ತಾನ–ಸೌದಿ ಅರೇಬಿಯಾ ರಕ್ಷಣಾ ಒಪ್ಪಂದವು ಭಾರತದ ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಾಗುವುದು.– ರಣಧೀರ್ ಜೈಸ್ವಾಲ್, ವಿದೇಶಾಂಗ ವ್ಯವಹಾರಗಳ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.