ADVERTISEMENT

ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಣೆ: ಪಾಕಿಸ್ತಾನ

ಏಜೆನ್ಸೀಸ್
Published 8 ಜುಲೈ 2020, 10:25 IST
Last Updated 8 ಜುಲೈ 2020, 10:25 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್    

ಇಸ್ಲಾಮಾಬಾದ್: ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ. ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

‘ತೀರ್ಪಿನ ಪುನರ್‌ ಪರಿಶೀಲನೆಗೆ ಮನವಿ ಮಾಡಿ ಅರ್ಜಿ ಸಲ್ಲಿಸಲು ಜೂನ್ 17ರಂದು ಕುಲಭೂಷಣ್ ಜಾಧವ್‌ಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದ್ದಾರೆ’ ಎಂದು ಹೆಚ್ಚುವರಿ ಅಟಾರ್ನಿ ಜನರಲ್ ಅವರ ಹೇಳಿಕೆ ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

2017ರ ಏಪ್ರಿಲ್ 17ರಂದು ಸಲ್ಲಿಸಲಾಗಿದ್ದು, ಬಾಕಿ ಇರುವ ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರಿಸಲು ಜಾಧವ್ ಒಲವು ತೋರಿದ್ದಾರೆ. ಜಾಧವ್ ಅವರಿಗೆ ರಾಜತಾಂತ್ರಿಕ ನೆರವು ಒದಗಿಸಲು ಪಾಕಿಸ್ತಾನ ಸರ್ಕಾರವು ಎರಡನೇ ಬಾರಿಗೆ ಭಾರತಕ್ಕೆ ಅವಕಾಶವನ್ನು ನೀಡಲಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ADVERTISEMENT

ಪಾಕಿಸ್ತಾನದ ಪ್ರಕಾರ, 2016ರ ಮಾರ್ಚ್ 3ರಂದು ಜಾಧವ್ ಅವರನ್ನು ಬಂಧಿಸಲಾಗಿದೆ. ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಅವರಿಗೆ 2017ರ ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಾಕಿಸ್ತಾನದ ಸೇನಾ ಕೋರ್ಟ್‌ ತೀರ್ಪಿನ ವಿರುದ್ಧ 2017ರ ಮೇನಲ್ಲಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು.

ಅಂತರರಾಷ್ಟ್ರೀಯ ನ್ಯಾಯಾಲಯವು ಕಳೆದ ವರ್ಷ ಜುಲೈನಲ್ಲಿ ನೀಡಿದ್ದ ತೀರ್ಪಿನಲ್ಲಿ, ಜಾಧವ್‌ಗೆ ರಾಜತಾಂತ್ರಿಕ ನೆರವು ನೀಡಲು ಭಾರತಕ್ಕೆ ಅವಕಾಶ ನೀಡುವಂತೆಯೂ ತೀರ್ಪನ್ನು ಪುನರ್ ಪರಿಶೀಲಿಸುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.