ADVERTISEMENT

ಪಾಕ್: ಆತ್ಮಾಹುತಿ ಬಾಂಬ್‌ ದಾಳಿ–ಮೂವರ ಬಂಧನ

ಪಿಟಿಐ
Published 7 ಫೆಬ್ರುವರಿ 2026, 14:23 IST
Last Updated 7 ಫೆಬ್ರುವರಿ 2026, 14:23 IST
   

ಇಸ್ಲಾಮಾಬಾದ್‌/ಪೆಶಾವರ: ಇಸ್ಲಾಮಾಬಾದ್‌ನ ಶಿಯಾ ಮಸೀದಿಯಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆ ಸೇರಿ ಮೂವರನ್ನು ಪಾಕಿಸ್ತಾನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

‘ಖದೀಜತ್‌ ಉಲ್‌ ಕುಬ್ರಾ’ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್‌ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 31 ಜನರು ಮೃತಪಟ್ಟು, 169 ಮಂದಿ ಗಾಯಗೊಂಡಿದ್ದಾರೆ.

ಆತ್ಮಾಹುತಿ ಬಾಂಬರ್‌ನ ಇಬ್ಬರು ಸಹೋದರರು ಮತ್ತು ಮಹಿಳೆಯೊಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಬಂಧಿತರಿಂದ ಗುರುತಿನ ಚೀಟಿಯನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದ ಆತ್ಮಾಹುತಿ ಬಾಂಬರ್‌ನನ್ನು ‘ಯಾಸಿರ್’ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಅಧಿಕೃತ ದಾಖಲೆಗಳಲ್ಲಿ ದಾಳಿಕೋರನ ಶಾಶ್ವತ ವಿಳಾಸವು ಪೆಶಾವರದ ಅಬ್ಬಾಸ್‌ ಕಾಲೊನಿ ಎಂದಿದೆ. ತಾತ್ಕಾಲಿಕ ವಿಳಾಸವು ಪೆಶಾವರದ ಗಂಜ್‌ ಮೊಹ್ಲಾ ಕಾಜಿಯಾನ್‌ ಎಂದಿದೆ. ದಾಳಿಗೂ ಮೊದಲು ದಾಳಿಕೋರ ಅಫ್ಗಾನಿಸ್ತಾನದಲ್ಲಿ ಐದು ತಿಂಗಳು ವಾಸವಿದ್ದ. ಅಲ್ಲಿ ಶಸ್ತ್ರಾಸ್ತ್ರ ಬಳಕೆ ಮತ್ತು ಆತ್ಮಾಹುತಿ ಬಾಂಬ್‌ ದಾಳಿ ಬಗ್ಗೆ ತರಬೇತಿ ಪಡೆದಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ಹೊಣೆ ಹೊತ್ತ ಐಎಸ್‌:

ಇಸ್ಲಾಮಿಕ್‌ ಸ್ಟೇಟ್‌ ಗ್ರೂಪ್‌ (ಐಎಸ್‌) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಭಯೋತ್ಪಾದಕ ಸಂಘಟನೆಯ ಸದಸ್ಯನೊಬ್ಬ ದೊಡ್ಡ ಸಮೂಹವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.