ADVERTISEMENT

ಕರ್ನಾಟಕದಲ್ಲಿ ಹಿಜಾಬ್ ವಿವಾದ: ಭಾರತದ ಅಧಿಕಾರಿಗಳಿಗೆ ಸಮನ್ಸ್ ನೀಡಿದ ಪಾಕಿಸ್ತಾನ

ಪಿಟಿಐ
Published 10 ಫೆಬ್ರುವರಿ 2022, 6:59 IST
Last Updated 10 ಫೆಬ್ರುವರಿ 2022, 6:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್:ಕರ್ನಾಟಕದಲ್ಲಿ ತಲೆದೋರಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನವು, ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ವಿದೇಶಾಂಗ ಸಚಿವಾಲಯದಲ್ಲಿ ಸಮನ್ಸ್ ಜಾರಿಗೊಳಿಸಿದೆ.

ಭಾರತದಲ್ಲಿ ಮುಸ್ಲಿಮರ ವಿರುದ್ಧಧಾರ್ಮಿಕ ಅಸಹಿಷ್ಣುತೆ, ತಾರತಮ್ಯ ಹಾಗೂ ನಕಾರಾತ್ಮಕ ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನ ಗಂಭೀರವಾಗಿ ಕಳವಳ ವ್ಯಕ್ತಪಡಿಸುತ್ತದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅಲ್ಲಿನ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

ಭಾರತ ಸರ್ಕಾರವು, ಮುಸ್ಲಿಂ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಲು, ಕರ್ನಾಟಕದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಗಂಭೀರ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಒತ್ತಾಯಿಸಿದೆ.

ADVERTISEMENT

ಇದಕ್ಕೂ ಮುನ್ನ,'ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾರಿಗಾದರೂ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಟ್ವಿಟರ್‌ನಲ್ಲಿ ಟೀಕಿಸಿದ್ದರು.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಹುಸೇನ್ ಅವರು, 'ಭಾರತದಲ್ಲಿನ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಯಾವುದೇ ಇತರ ಉಡುಪುಗಳಂತೆ ಹಿಜಾಬ್ ಧರಿಸುವುದೂ ವೈಯಕ್ತಿಕ ಆಯ್ಕೆಯಾಗಿದೆ. ನಾಗರಿಕರಿಗೆ ಮುಕ್ತ ಅವಕಾಶವನ್ನು ನೀಡಬೇಕು' ಎಂದು ಆಗ್ರಹಿಸಿದ್ದರು.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಅವರು ಪಾಕ್ ಸಚಿವರುಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ ಹೊಂದಿರುವಭಾರತದ ಹೆಸರು ಕೆಡಿಸುವ ಸಂಚಿನ ಭಾಗವಾಗಿ, ಕೆಲವರು ಸಮವಸ್ತ್ರ ಮತ್ತು ಸಂಸ್ಥೆಗಳ ಶಿಸ್ತಿನ ನಿರ್ಧಾರಕ್ಕೆ ಕೋಮು ಬಣ್ಣ ಬಳಿಯುತ್ತಿದ್ದಾರೆ. ಅಲ್ಪ ಸಂಖ್ಯಾತರ ಪಾಲಿಗೆ ಅಪರಾಧ ಮತ್ತು ಕ್ರೌರ್ಯದ ಅರಣ್ಯದಂತೆ ಇರುವ ದೇಶ, ಭಾರತಕ್ಕೆ ಸಹಿಷ್ಣುತೆ ಮತ್ತುಜಾತ್ಯಾತೀತೆಯ ಬಗ್ಗೆ ಬೋಧಿಸುತ್ತಿದೆ ಎಂದು ತಿರುಗೇಟು ನೀಡಿದ್ದರು.

ಹಿಜಾಬ್ ಧರಿಸಿ ಬಂದಿದ್ದ ಆರು ವಿದ್ಯಾರ್ಥಿನಿಯರಿಗೆ ಉಡುಪಿಯ ಪದವಿ ಪೂರ್ವ ಕಾಲೇಜೊಂದು ಜನವರಿಯಲ್ಲಿ ಪ್ರವೇಶ ನಿರಾಕರಿಸಿತ್ತು. ಬಳಿಕ ಈ ವಿವಾದ ರಾಜ್ಯದಾದ್ಯಂತ ವಿಸ್ತರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.