ಮಾಸ್ಕೊ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ತನಿಖೆ ನಡೆಸುವ ತಂಡದಲ್ಲಿ ರಷ್ಯಾ ಹಾಗೂ ಚೀನಾ ಪ್ರತಿನಿಧಿಗಳೂ ಇರಲಿ ಎಂದು ಪಾಕಿಸ್ತಾನ ಹೇಳಿದೆ.
ರಷ್ಯಾ ಸರ್ಕಾರ ಒಡೆತನದ ಆರ್‌ಐಎ ನೊವೊಸ್ತಿ ಸುದ್ದಿಸಂಸ್ಥೆಗೆ ಇತ್ತೀಚೆಗೆ ಸಂದರ್ಶನ ನೀಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್,‘ಪ್ರಧಾನಿ ಶೆಹಬಾಜ್ ಶರೀಫ್ ಅವರು, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಅಂತರರಾಷ್ಟ್ರೀಯ ತನಿಖೆ ನಡೆಯಬೇಕು ಎಂಬ ಪ್ರಸ್ತಾವ ಮುಂದಿಟ್ಟದ್ದಾರೆ’ ಎಂದು ಹೇಳಿದ್ದಾರೆ.
‘ಉಗ್ರರ ದಾಳಿಯಿಂದಾಗಿ ಉದ್ಭವಿಸಿರುವ ಈ ಬಿಕ್ಕಟ್ಟಿನಲ್ಲಿ ರಷ್ಯಾ ಅಥವಾ ಚೀನಾ ಜೊತೆಗೆ ಪಶ್ಚಿಮ ರಾಷ್ಟ್ರಗಳು ಕೂಡ ಬಹಳ ಸಕಾರಾತ್ಮಕ ಪಾತ್ರ ವಹಿಸಬಹುದಾಗಿದೆ’ ಎಂದೂ ಹೇಳಿದ್ದಾರೆ.
‘ಭಾರತ ಸುಳ್ಳು ಹೇಳುತ್ತಿದೆಯೇ? ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಅವರು ಹೇಳುವುದು ಸತ್ಯವೇ ಎಂಬ ಕುರಿತು ತನಿಖೆ ನಡೆಸಲು ರಷ್ಯಾ ಅಥವಾ ಚೀನಾ ತನಿಖಾ ತಂಡವೊಂದನ್ನು ರಚಿಸಲಿ. ಈ ಅಂತರರಾಷ್ಟ್ರೀಯ ತಂಡ ಸತ್ಯ ಬಯಲಿಗೆಳೆಯಲಿ’ ಎಂದೂ ಆಸಿಫ್ ಹೇಳಿದ್ದಾರೆ.
‘ಘಟನೆ ಕುರಿತಂತೆ ಕೇವಲ ಮಾತನಾಡುವುದು ಅಥವಾ ಹೇಳಿಕೆಗಳನ್ನು ನೀಡುವುದರಿಂದ ಏನೂ ಉಪಯೋಗವಿಲ್ಲ. ಪಾಕಿಸ್ತಾನವೇ ದಾಳಿ ನಡೆಸಿದೆ ಅಥವಾ ದಾಳಿ ನಡೆಸಿದವರಿಗೆ ಪಾಕಿಸ್ತಾನದ ಬೆಂಬಲ ಇತ್ತು ಎಂಬ ಬಗ್ಗೆ ಸಾಕ್ಷ್ಯಗಳು ಇರಬೇಕು’ ಎಂದಿದ್ದಾರೆ.
‘ಪಾಕ್‌ನಿಂದ ಭಯೋತ್ಪಾದನೆ ಸಮರ್ಥಿಸುವ ಹೇಳಿಕೆ’
‘ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಭಾರತದ ಆರೋಪಗಳನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು ಇದು ನಿರೀಕ್ಷಿತ ಪ್ರತಿಕ್ರಿಯೆ. ಅಚ್ಚರಿಯೆಂಬಂತೆ ಭಯೋತ್ಪಾದನೆಯನ್ನು ಸಮರ್ಥನೆ ಮಾಡುವಂತಹ ಹೇಳಿಕೆಗಳನ್ನು ಉನ್ನತ ಸ್ಥಾನದಲ್ಲಿರುವ ಇಬ್ಬರು ಪಾಕಿಸ್ತಾನಿಯರು ನೀಡಿದ್ದಾರೆ’ ಎಂದು ಮಾಸ್ಕೊ ಮೂಲದ ಅಮೆರಿಕದ ಸ್ವತಂತ್ರ ವಿಶ್ಲೇಷಕ ಆ್ಯಂಡ್ರ್ಯೂ ಕೊರಿಬ್ಕೊ ಹೇಳಿದ್ದಾರೆ.
‘ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ದಾಳಿ ನಡೆಸಿರುವವರು ಬಹುಶಃ ಸ್ವಾತಂತ್ರ್ಯ ಹೋರಾಟಗಾರರು ಇದ್ದಿರಬೇಕು ಎಂದು ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಇಶಾಕ್ ದರ್ ಹೇಳಿದ್ದಾರೆ.
ಪ್ರವಾಸಿಗರನ್ನು ಹತ್ಯೆ ಮಾಡಿದವರು ‘ಸ್ವಾತಂತ್ರ್ಯ ಹೋರಾಟಗಾರರು ಇದ್ದಿರಬಹುದು’ ಎಂಬ ಹೇಳಿಕೆಯು ವಿಶ್ವದೆಲ್ಲೆಡೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವವರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದಂತಾಗಿದೆ’ ಎಂದು ಆ್ಯಂಡ್ರ್ಯೂ ಹೇಳಿದ್ದಾರೆ.
‘ಕಾಶ್ಮೀರ ಬಿಕ್ಕಟ್ಟಿನ ಕುರಿತು ಒಬ್ಬರ ಅಭಿಪ್ರಾಯ ಏನೇ ಇದ್ದಿರಬಹುದು. ಆದರೆ ಪ್ರವಾಸಿಗರ ಹತ್ಯೆಯು ಅದರಲ್ಲೂ ಧರ್ಮದ ಆಧಾರದಲ್ಲಿ ಮಾಡಿರುವುದು ಭಯೋತ್ಪಾದಕ ಕೃತ್ಯವೇ ಸರಿ’ ಎಂದು ತಮ್ಮ ಬುಲೆಟಿನ್‌ನಲ್ಲಿ ಬರೆದಿದ್ದಾರೆ.
'ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಉದ್ದೇಶದ ಭಾಗವಾಗಿರಬಹುದು ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಅಲ್ ಜಝೀರಾ ಮಾಧ್ಯಮ ಸಂಸ್ಥೆಗೆ ನೀಡಿರುವ ಸಂದರ್ಭದಲ್ಲಿ ಹೇಳಿದ್ದಾರೆ. ಈ ಇಬ್ಬರ ಹೇಳಿಕೆಗಳು ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿನಿಸುವಂತಿವೆ’ ಎಂದು ಆ್ಯಂಡ್ರೂ ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.