ADVERTISEMENT

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಷರತ್ತು ಒಪ್ಪಲೇಬೇಕಿದೆ: ಪಾಕ್‌ ಪ್ರಧಾನಿ

ಏಜೆನ್ಸೀಸ್
Published 3 ಫೆಬ್ರುವರಿ 2023, 14:52 IST
Last Updated 3 ಫೆಬ್ರುವರಿ 2023, 14:52 IST
ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್   

ಪೆಶಾವರ: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವಿಧಿಸುವ ಕಲ್ಪನೆಗೂ ಮೀರಿದ ಷರತ್ತುಗಳನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಹಣಕಾಸಿನ ನೆರವು ನೀಡುವ ಕುರಿತ ಮಾತುಕತೆಗಾಗಿ ಐಎಂಎಫ್‌ನ ನಿಯೋಗವು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ಕಡಿತಕ್ಕೆ ಸಂಬಂಧಿಸಿದಂತೆ ಐಎಂಎಫ್ ಒತ್ತಾಯಿಸಿತ್ತು. ಇದಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಷರೀಫ್‌, ‘ಹೆಚ್ಚೇನೂ ಹೇಳಲಾರೆ. ಆದರೆ ನಮ್ಮ ಆರ್ಥಿಕ ಸವಾಲು ಊಹಿಸಲೂ ಅಸಾಧ್ಯವಾಗಿದೆ. ಹೀಗಾಗಿ ಐಎಂಎಫ್‌ನ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಿದೆ’ ಎಂದು ಹೇಳಿದ್ದಾರೆ.

ADVERTISEMENT

ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ವಿದೇಶಿ ವಿನಿಮಯ ಸಂಗ್ರಹ ₹25,461 ಕೋಟಿಗೆ (3.1 ಬಿಲಿಯನ್ ಡಾಲರ್‌) ಕುಸಿದಿದೆ ಎಂದು ದೇಶದ ಕೇಂದ್ರೀಯ ಬ್ಯಾಂಕ್ ಇತ್ತೀಚೆಗೆ ಹೇಳಿದೆ.

ಉಗ್ರ ದಾಳಿ ತಡೆಯುವಲ್ಲಿ ವಿಫಲ– ಷರೀಫ್‌ (ಇಸ್ಲಾಮಾಬಾದ್ ವರದಿ): ‘100ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಪೆಶಾವರ ಹತ್ಯಾಕಾಂಡವನ್ನು ತಡೆಯುವಲ್ಲಿ ನಾವು ವಿಫರಾಗಿರುದ್ದೇವೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.

ಮಸೀದಿ ದಾಳಿ ಮತ್ತು ದೇಶದಲ್ಲಿ ಉದ್ಭವಿಸುತ್ತಿರುವ ಭಯೋತ್ಪಾದಕ ಪರಿಸ್ಥಿತಿಯ ಕುರಿತು ಇಲ್ಲಿನ ಗವರ್ನರ್ ಹೌಸ್‌ನಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಷರೀಫ್ ಅವರು, ವಿರೋಧ ಪಕ್ಷಗಳ ವ್ಯಾಪಕ ಟೀಕೆಗೆ ಹತಾಶೆ ವ್ಯಕ್ತಪಡಿಸಿದರು.

‘ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಲೋಪದಿಂದ ಈ ಕೃತ್ಯ ನಡೆದಿದೆ. ಸತ್ಯವನ್ನು ಒಪ್ಪಿಕೊಳ್ಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಅವರು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.