ADVERTISEMENT

ಇಸ್ಲಾಮೋಫೋಬಿಯಕ್ಕೆ ಕಡಿವಾಣ ಹಾಕಿ: ಫೇಸ್‌ಬುಕ್‌ಗೆ‌ ಇಮ್ರಾನ್‌ ಖಾನ್‌ ಪತ್ರ

ರಾಯಿಟರ್ಸ್
Published 26 ಅಕ್ಟೋಬರ್ 2020, 10:23 IST
Last Updated 26 ಅಕ್ಟೋಬರ್ 2020, 10:23 IST
   

ಇಸ್ಲಾಮಾಬಾದ್‌: ಇಸ್ಲಾಮೋಫೋಬಿಯ (ಇಸ್ಲಾಂ ಧರ್ಮ ವಿರೋಧಿ) ವಿಷಯವನ್ನು ನಿಷೇಧಿಸುವಂತೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಸಂಸ್ಥಾಪಕ, ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಮನವಿ ಮಾಡಿದ್ದಾರೆ. ಈ ರೀತಿಯ ವಿಷಯಗಳಿಂದಾಗಿ ತೀವ್ರವಾದ ಹೆಚ್ಚುವ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಇಮ್ರಾನ್‌ ಖಾನ್‌ ಅವರು ಫೇಸ್‌ಬುಕ್‌ ಸಿಇಒಗೆ ಪತ್ರ ಬರೆದಿದ್ದು, ಅದನ್ನು ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ... ಅದರಲ್ಲೂ ಫೇಸ್‌ಬುಕ್‌ನಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾದ ಪರಿಣಾಮವಾಗಿ ವಿಶ್ವದಾದ್ಯಂತ ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರೋತ್ಸಾಹ ದೊರೆಯುತ್ತಿದೆ,’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಹತ್ಯಾಕಾಂಡ’ದ ವಿರುದ್ಧ ಫೇಸ್‌ಬುಕ್‌ ಜಾರಿಯಲ್ಲಿಟ್ಟಿರುವ ನಿಷೇಧದಂತೆಯೇ ಇಸ್ಲಾಮೋಫೋಬಿಯಾ ವಿಚಾರಗಳ ಪೋಸ್ಟ್‌ಗಳ ಮೇಲೂ ನಿಷೇಧ ಹೇರಬೇಕು ಎಂದು ಖಾನ್‌ ಒತ್ತಾಯಿಸಿದ್ದಾರೆ.

ADVERTISEMENT

ಖಾನ್ ಮನವಿಯ ಕುರಿತು ಸುದ್ದಿ ಸಂಸ್ಥೆ ರಾಯಿಟರ್ಸ್‌ ಜೊತೆಗೆ ಮಾತನಾಡಿರುವ ಫೇಸ್ಬುಕ್‌ನ ವಕ್ತಾರರು, 'ಕಂಪನಿಯು ಎಲ್ಲಾ ರೀತಿಯ ದ್ವೇಷದ ವಿರುದ್ಧವಿದೆ. ಜನಾಂಗ, ಜನಾಂಗೀಯವಾದ, ರಾಷ್ಟ್ರ ಅಥವಾ ಧರ್ಮದ ಆಧಾರದಲ್ಲಿ ನಡೆಸುವ ದಾಳಿಯನ್ನು ಫೇಸ್‌ಬುಕ್‌ ಒಪ್ಪುವುದಿಲ್ಲ,' ಎಂದು ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರದ ಕುರಿತ ತರಗತಿಯೊಂದರಲ್ಲಿ ಪ್ರವಾದಿ ಮೊಹಮ್ಮದ್‌ರ ವ್ಯಂಗ್ಯಚಿತ್ರ ಬಳಸಿದ ಕಾರಣಕ್ಕೆ ಫ್ರಾನ್ಸ್‌ನ ಇತಿಹಾಸ ಶಿಕ್ಷಕ ಸಾಮ್ಯುಯಲ್‌ ಪ್ಯಾಟಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಸ್ಯಾಮ್ಯುಯಲ್‌ ಪ್ಯಾಟಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ಯಾಟಿ ಅವರಿಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯಯಲ್‌ ಮ್ಯಾಕ್ರಾನ್‌ ಗೌರವ ಸೂಚಿಸಿದ್ದನ್ನು ಖಾನ್‌ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಫ್ರಾನ್ಸ್‌ನಲ್ಲಿ ಇಸ್ಲಾಂ ಅನ್ನು ಭಯೋತ್ಪಾದನೆಗೆ ಹೋಲಿಸಲಾಗುತ್ತದೆ. ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಅವರು ಪ್ರವಾದಿ ಮೊಹಮ್ಮದ್ದರ ವ್ಯಂಗ್ಯ ಚಿತ್ರ ಬಳಸಿದವರಿಗೆ ಬೆಂಬಲ ಸೂಚಿಸಿ ಮಾತನಾಡುತ್ತಿದ್ದಾರೆ,' ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.