ADVERTISEMENT

ಕರಾಚಿ | ಗುಂಡಿನ ಚಕಮಕಿ: ಐವರು ಉಗ್ರರ ಬಲಿ

ಕರಾಚಿ ಪೊಲೀಸ್‌ ಕಚೇರಿ ವಶಕ್ಕೆ ಉಗ್ರರ ಯತ್ನ. ಇತರ ನಾಲ್ವರೂ ಸಾವು

ಪಿಟಿಐ
Published 18 ಫೆಬ್ರುವರಿ 2023, 11:19 IST
Last Updated 18 ಫೆಬ್ರುವರಿ 2023, 11:19 IST
ಉಗ್ರರು ದಾಳಿ ನಡೆಸಿದ್ದ ಕರಾಚಿಯ ಪೊಲೀಸ್ ಮುಖ್ಯಸ್ಥರ ಕೇಂದ್ರ ಕಚೇರಿ –ಎಎಫ್‌ಪಿ ಚಿತ್ರ
ಉಗ್ರರು ದಾಳಿ ನಡೆಸಿದ್ದ ಕರಾಚಿಯ ಪೊಲೀಸ್ ಮುಖ್ಯಸ್ಥರ ಕೇಂದ್ರ ಕಚೇರಿ –ಎಎಫ್‌ಪಿ ಚಿತ್ರ   

ಕರಾಚಿ: ಪೊಲೀಸ್ ಇಲಾಖೆಯ ಮುಖ್ಯಸ್ಥರ ಕಚೇರಿಯ ಮೇಲೆ ದಾಳಿ ನಡೆಸಿ, ಇಡೀ ಕಟ್ಟಡ ವಶಕ್ಕೆ ಪಡೆಯಲು ಯತ್ನಿಸಿದ್ದ ಐವರು ಉಗ್ರರು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಉಗ್ರರನ್ನು ತೆಹ್ರೀಕ್ ಇ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಸಂಘಟನೆ ಸದಸ್ಯರು ಎಂದು ಗುರುತಿಸಲಾಗಿದೆ. ಐದು ಮಹಡಿಗಳ ಕಚೇರಿ ವಶಕ್ಕೆ ಉಗ್ರರು ಯತ್ನಿಸಿದ್ದರು. ಶುಕ್ರವಾರ ತಡರಾತ್ರಿ ಕೃತ್ಯ ನಡೆದಿದೆ. ಈ ವೇಳೆ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳು, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.

ದಾಳಿ ಸಂದರ್ಭದಲ್ಲಿ ಮೂವರು ಉಗ್ರರು ಗುಂಡೇಟಿನಿಂದ ಮೃತಪಟ್ಟರೆ, ಇತರೆ ಇಬ್ಬರು ಇಬ್ಬರು ಸ್ವಯಂ ಗುಂಡು ಹಾರಿಸಿಕೊಂಡರು. ದಾಳಿ ಆತಂಕ ಮೂಡಿಸಿದ್ದು, ನಾಲ್ಕು ಗಂಟೆ ಕಾಲ ಕಾರ್ಯಾಚರಣೆ ನಡೆಯಿತು.

ADVERTISEMENT

ಉಗ್ರರ ದಾಳಿ, ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕಟ್ಟಡವು ಭಾಗಶಃ ಜಖಂಗೊಂಡಿದೆ. ಪರಿಸ್ಥಿತಿ ಈಗ ಒಟ್ಟಾರೆ ನಿಯಂತ್ರಣದಲ್ಲಿದೆ. ಕಾರ್ಯಾಚರಣೆ ಸಂದರ್ಭದಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಸೆರೆ ಹಿಡಿಯಲಾಗಿದೆ ಎಂದು ಸಿಂಧ್‌ ಸರ್ಕಾರದ ವಕ್ತಾರ ಮುರ್ತಾಜಾ ವಾಹಬ್‌ ಟ್ವೀಟ್‌ ಮಾಡಿದ್ದಾರೆ.

ಒಟ್ಟು ಎಷ್ಟು ಮಂದಿ ಉಗ್ರರುದಾಳಿ ನಡೆಸಿದರು ಎಂಬುದು ಖಚಿತವಿಲ್ಲ. ಅಧಿಕೃತ ಮೂಲಗಳ ಪ್ರಕಾರ, ಎಂಟು ಮಂದಿ ಶಸ್ತ್ರಸಜ್ಜಿತರು ದಾಳಿ ನಡೆಸಿದ್ದಾರೆ. ಕಟ್ಟಡದ ನಿಯಂತ್ರಣವನ್ನು ಭದ್ರತಾ ಸಿಬ್ಬಂದಿ ಪಡೆದಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಖಚಿತ ವಿವರ ತಿಳಿಯಲಿದೆ ಎಂದು ವಿವರಿಸಿದ್ದಾರೆ.

ಕಟ್ಟಡದ ಬಳಿ ಎರಡು ಕಾರುಗಳು ಪತ್ತೆಯಾಗಿವೆ. ಬಾಂಬ್ ಪತ್ತೆ ಪರಿಣತರು ತಪಾಸಣೆ ನಡೆಸಿದ್ದಾರೆ. ಉಗ್ರರ ಬಳಿ ಅತ್ಯಾಧುನಿಕ ಶಸ್ತ್ರಗಳಿದ್ದು, ಪೂರ್ವನಿಯೋಜಿತರಾಗಿ ಬಂದಿದ್ದರು. ಉಗ್ರರು ಪೊಲೀಸ್‌ ಸಮವಸ್ತ್ರದಲ್ಲೇ ಪೊಲೀಸ್‌ ಮುಖ್ಯಸ್ಥರ ಕಚೇರಿಯ ಕಟ್ಟಡ ಪ್ರವೇಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬಾರಿ ಟಿಟಿಪಿ ಉಗ್ರರು 2020ರಲ್ಲಿ ಕರಾಚಿ ಷೇರುವಿನಿಮಯ ಕೇಂದ್ರದ ಮೇಲೆ ದಾಳಿ ನಡೆಸಿದ್ದರು. ಆಗ ಮೂವರು ನಾಗರಿಕರು, ಮೂವರು ಉಗ್ರರು ಮೃತಪಟ್ಟಿದ್ದರು. ಅದಕ್ಕೂ ಹಿಂದೆ 2014ರಲ್ಲಿ ಜಿನ್ನಾ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ದಾಳಿ ನಡೆದಿದ್ದು, 24 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.