ADVERTISEMENT

ಪಾಕಿಸ್ತಾನದ ಮಾಜಿ ಅಧ್ಯಕ್ಷ ಜರ್ದಾರಿ ಬಂಧನ

ನಕಲಿ ಬ್ಯಾಂಕ್‌ ಖಾತೆ ಮೂಲಕ ₹15 ಕೋಟಿ ವಹಿವಾಟು ನಡೆಸಿದ ಆರೋಪ

ಪಿಟಿಐ
Published 10 ಜೂನ್ 2019, 19:45 IST
Last Updated 10 ಜೂನ್ 2019, 19:45 IST
ಆಸೀಫ್‌ ಅಲಿ ಜರ್ದಾರಿ
ಆಸೀಫ್‌ ಅಲಿ ಜರ್ದಾರಿ   

ಇಸ್ಲಾಮಾಬಾದ್‌: ನಕಲಿ ಬ್ಯಾಂಕ್‌ ಖಾತೆಗಳ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎನ್‌ಎಬಿ) ಸೋಮವಾರ ಬಂಧಿಸಿದೆ.

ಜರ್ದಾರಿ ಅವರ ಬಂಧನ ತಡೆಗೆ ನೀಡಿದ್ದ ಜಾಮೀನು ವಿಸ್ತರಣೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ವಜಾಗೊಳಿಸಿದೆ. ಅರ್ಜಿ ವಜಾ ಆಗುತ್ತಿದ್ದಂತೆ ಎನ್‌ಎಬಿ ಅಧಿಕಾರಿಗಳ ತಂಡವು, ಪೊಲೀಸರು ಮತ್ತು ಮಹಿಳಾ ಸಿಬ್ಬಂದಿ ಜತೆಗೆ ತೆರಳಿ ಜರ್ದಾರಿ ಅವರನ್ನು ಅವರ ನಿವಾಸದಲ್ಲಿಯೇ ಬಂಧಿಸಿದ್ದಾರೆ.

ಇದೇ ಪ್ರಕರಣದ ಆರೋಪಿಯಾಗಿರುವ ಜರ್ದಾರಿ ಅವರ ಸಹೋದರಿ, ಫರ್ಯಾಲ್‌ ತಾಲ್ಪುರ್‌ ಅವರನ್ನು ಈವರೆಗೂ ಬಂಧಿಸಿಲ್ಲ.

ADVERTISEMENT

ಜರ್ದಾರಿ ಬಂಧನಕ್ಕೆ ಎನ್‌ಎಬಿ ಭಾನುವಾರವೇ ವಾರಂಟ್‌ ಹೊರಡಿಸಿತ್ತು. ನಕಲಿ ಬ್ಯಾಂಕ್‌ ಖಾತೆ ತೆರೆದು, ಆ ಮೂಲಕ ಹಣವನ್ನು ಪಾಕಿಸ್ತಾನದಿಂದ ವಿದೇಶಕ್ಕೆ ವರ್ಗಾಯಿಸಲಾಗಿದೆ. ಈ ಇಬ್ಬರೂ ಆರೋಪಿಗಳು ನಕಲಿ ಖಾತೆಗಳ ಮೂಲಕ ₹15 ಕೋಟಿ ವಹಿವಾಟು ನಡೆಸಿದ್ದಾರೆ ಎಂದು ಎನ್‌ಎಬಿ ಆರೋಪಿಸಿದೆ.

ಬಂಧನ ತಡೆಗೆ ನೀಡಿದ್ದ ಜಾಮೀನು ವಿಸ್ತರಿಸಲು ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ಸೋಮವಾರ ವಜಾಗೊಳಿಸಿತ್ತು. ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ನಲ್ಲಿದ್ದ ಜರ್ದಾರಿ ಹಾಗೂ ಅವರ ಸಹೋದರಿ ಫರ್ಯಾಲ್‌ ಅವರು ಆದೇಶ ಬರುವಹೊತ್ತಿಗೆ ತಮ್ಮ ಮನೆಗೆ ತೆರಳಿದ್ದರು. ಆದ್ದರಿಂದ ಅವರ ಮನೆಗೆ ಹೋಗಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಎನ್‌ಎಬಿ ತನಿಖೆ ನಡೆಸಿತ್ತು. ಮೇ 14 ರಂದು ಈ ಪ್ರಕರಣದ ತನಿಖೆಯ ಸಮಗ್ರ ವರದಿಯನ್ನು ಎನ್‌ಎಬಿ ಸಲ್ಲಿಸಿತ್ತು. ನಕಲಿ ಬ್ಯಾಂಕ್‌ ಖಾತೆಗಳ ಎಂಟು ಪ್ರಕರಣಗಳಲ್ಲಿ ಜರ್ದಾರಿ ಅವರು ಸಂಪರ್ಕ ಹೊಂದಿರುವುದು ಗೊತ್ತಾಗಿದೆ ಎಂದು ತನಿಖಾ ಸಂಸ್ಥೆಯು ವರದಿಯಲ್ಲಿ ಹೇಳಿದೆ.

ಆಸೀಫ್‌ ಅಲಿ ಜರ್ದಾರಿ ಬಂಧನ ಖಂಡಿಸಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಕಾರ್ಯಕರ್ತರು ಕರಾಚಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. -ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.