
ಪಪುವಾ ನ್ಯೂಗಿನಿಯ ಪೊಗೆರಾ ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಿಲುಕಿರುವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸ್ಥಳೀಯ ಜನರು
–ಪಿಟಿಐ ಚಿತ್ರ
ಮೆಲ್ಬರ್ನ್: ಪಪುವಾ ನ್ಯೂಗಿನಿಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ 2,000ಕ್ಕೂ ಹೆಚ್ಚು ಜನರು ಸಮಾಧಿಯಾಗಿದ್ದಾರೆ ಎಂದು ಹೇಳಿರುವ ಅಲ್ಲಿನ ಸರ್ಕಾರ, ಅಂತರರಾಷ್ಟ್ರೀಯ ನೆರವನ್ನು ಕೋರಿದೆ.
ಈ ದುರಂತದಲ್ಲಿ ಸುಮಾರು 670 ಜನರು ಮೃತಪಟ್ಟಿರಬಹುದು ಎಂದು ವಿಶ್ವಸಂಸ್ಥೆ ಭಾನುವಾರವಷ್ಟೇ ಅಂದಾಜಿಸಿತ್ತು. ಆದರೆ ಪಪುವಾ ನ್ಯೂಗಿನ ಸರ್ಕಾರ ಪ್ರಕಟಿಸಿರುವ ಅಂಕಿಅಂಶವು, ವಿಶ್ವಸಂಸ್ಥೆಯ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಾಗಿದೆ.
ದುರಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವು–ನೋವು ಸಂಭವಿಸಿದ್ದು, ದಿನೇ ದಿನೇ ಮೃತರ ಅಂದಾಜು ಸಂಖ್ಯೆಯಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿವೆ. ಪಪುವಾ ನ್ಯೂಗಿನಿ ನೆರೆ ರಾಷ್ಟ್ರವಾದ ಆಸ್ಟ್ರೇಲಿಯಾ ಸೋಮವಾರ ವಿಮಾನ ಮತ್ತು ಇತರ ಉಪಕರಣಗಳೊಂದಿಗೆ ನೆರವಿಗೆ ಧಾವಿಸಿದೆ.
‘ಪಪುವಾ ನ್ಯೂಗಿನಿ ಸರ್ಕಾರದ ಪ್ರತಿನಿಧಿಗಳೊಂದಿಗೆ ಶುಕ್ರವಾರದಿಂದ ಆಸ್ಟ್ರೇಲಿಯಾ ಸರ್ಕಾರ ಸಂಪರ್ಕದಲ್ಲಿದೆ. ನಾವು ಅಲ್ಲಿ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಅಗತ್ಯ ನೆರವನ್ನು ನೀಡಲಿದ್ದೇವೆ. ಏರ್‌ಲಿಫ್ಟ್ ಸೇರಿದಂತೆ ಇತರ ರೀತಿಯಲ್ಲಿ ಸಹಾಯ ಮಾಡಲಿದ್ದೇವೆ’ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಹೇಳಿದ್ದಾರೆ.
ಭೂಕುಸಿತ ಸಂಭವಿಸಿರುವ ಯಂಬಲಿ ಗ್ರಾಮವು ಪ್ರಾಂತೀಯ ರಾಜಧಾನಿ ವಾಬಾಗ್‌ನಿಂದ 60 ಕಿ.ಮೀ. ದೂರದಲ್ಲಿದೆ. ವಾಬಾಗ್‌ನಲ್ಲಿ ರಾತ್ರಿ ಎರಡು ಗಂಟೆ ಭಾರಿ ಮಳೆ ಸುರಿದಿದೆ. ಆದರೆ, ಸದ್ಯಕ್ಕೆ ಯಂಬಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ಹವಾಮಾನದ ವರದಿ ಲಭ್ಯವಾಗಿಲ್ಲ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಭೂಮಿಯ ನಡುವೆ ನೀರು ಹರಿಯುತ್ತಿದ್ದು, ಮತ್ತಷ್ಟು ಭೂಕುಸಿತ ಸಂಭವಿಸುವ ಅಪಾಯ ಇದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯ ಅಧಿಕಾರಿ ಸರ್ಹಾನ್ ಅಕ್ಟೊಪ್ರಾಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.