ADVERTISEMENT

ಪಾಕ್‌: ನೂರಾರು ರೈಲು ಪ್ರಯಾಣಿಕರ ಒತ್ತೆಸೆರೆ

ಪಿಟಿಐ
Published 11 ಮಾರ್ಚ್ 2025, 13:13 IST
Last Updated 11 ಮಾರ್ಚ್ 2025, 13:13 IST
<div class="paragraphs"><p>ಪಾಕ್‌ನ ರೈಲ</p></div>

ಪಾಕ್‌ನ ರೈಲ

   

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ ಬಂದೂಕುಧಾರಿಗಳು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದಾರೆ.

ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಸ್ಥಳೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಈ ದಾಳಿ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದಾಳಿಯ ಹೊಣೆ ಹೊತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ), ‘ಹಳಿ ತಪ್ಪಿಸಿ ರೈಲನ್ನು ವಶಕ್ಕೆತೆಗೆದು ಕೊಳ್ಳಲಾಗಿದೆ. ರೈಲಿನ ಕರ್ತವ್ಯನಿರತ ಸಿಬ್ಬಂದಿ ಸೇರಿ ಪ್ರಯಾಣಿಕರನ್ನು ಒತ್ತೆ ಇರಿಸಿಕೊಳ್ಳಲಾಗಿದೆ’ ಎಂದು ಹೇಳಿಕೊಂಡಿದೆ. 

ADVERTISEMENT

ರಕ್ಷಣಾ ತಂಡಗಳು ಮತ್ತು ಭದ್ರತಾ ಪಡೆಗಳು ಸ್ಥಳ ತಲುಪಿದ್ದು, ಒತ್ತೆಯಾಳುಗಳ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪ್ರಯಾಣಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಾಂತೀಯ ಸರ್ಕಾರವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. 

ಪೆಹ್ರೊ ಕುನ್ರಿ ಮತ್ತು ಗಡಲಾರ್ ನಡುವೆ ರೈಲು ಸಂಚರಿಸುತ್ತಿದ್ದಾಗ
ರೈಲಿನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ.

‘ಒಂದು ವೇಳೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದರೆ ಎಲ್ಲ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬಿಎಲ್‌ಎ ಎಚ್ಚರಿಕೆ ನೀಡಿದೆ’ ಎಂದು ಮೂಲಗಳು ಹೇಳಿವೆ. 

‘ಒಂಬತ್ತು ಬೋಗಿಗಳಿರುವ ರೈಲಿನಲ್ಲಿ 500 ಪ್ರಯಾಣಿಕರಿದ್ದರು. ಸುರಂಗವೊಂದರ ಬಳಿ ಶಸ್ತ್ರಸಜ್ಜಿತ ಉಗ್ರರು ರೈಲು ತಡೆದಿದ್ದಾರೆ. ಈ ರೈಲು ಮಾರ್ಗದಲ್ಲಿ 17 ಸುರಂಗಗಳಿವೆ. ದುರ್ಗಮ ಭೂಪ್ರದೇಶದಿಂದಾಗಿ, ಈ ಭಾಗದಲ್ಲಿ ರೈಲು ನಿಧಾನವಾಗಿ ಸಂಚರಿಸುತ್ತದೆ’ ಎಂದು ರೈಲ್ವೆ ನಿಯಂತ್ರಕ ಮುಹಮ್ಮದ್ ಕಾಶಿಫ್ ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿರುವುದನ್ನು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದು, ಸಹಾಯಕ್ಕಾಗಿ ತುರ್ತು ಪರಿಹಾರ ರೈಲನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.

ಈ ಪ್ರದೇಶದ ರೈಲ್ವೆ ಹಳಿಗಳ ಮೇಲೆ ಈ ಹಿಂದೆಯೂ ಬಲೂಚ್‌ ಬಂಡುಕೋರರು ಬಾಂಬ್‌ ದಾಳಿ ನಡೆಸಿದ್ದರು. ಬಲೂಚಿಸ್ತಾನದಲ್ಲಿಭಯೋತ್ಪಾದಕ ದಾಳಿಗಳು ಒಂದು ವರ್ಷದಿಂದ ಹೆಚ್ಚಾಗಿವೆ. 2024ರ ನವೆಂಬರ್‌ನಲ್ಲಿ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ 26 ಜನರು ಮೃತಪಟ್ಟು, 62 ಜನರು ಗಾಯಗೊಂಡಿದ್ದರು.

ಪೆಹ್ರೊ ಕುನ್ರಿ ಮತ್ತು ಗಡಲಾರ್ ನಡುವೆ ರೈಲು ಸಂಚರಿಸುತ್ತಿದ್ದಾಗ ರೈಲಿನಲ್ಲಿ ಭಾರಿ ಗುಂಡಿನ ದಾಳಿ ನಡೆದಿದೆ.
–ಶಾಹಿದ್ ರಿಂಡ್, ಬಲೂಚಿಸ್ತಾನ್ ಸರ್ಕಾರದ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.