ADVERTISEMENT

ವಿಡಿಯೊ ನೋಡಿ: ರನ್‌ವೇಯಲ್ಲಿ ನಿಂತ ವಿಮಾನವನ್ನು ತಳ್ಳಿ ಬದಿಗೆ ಸರಿಸಿದ ಪ್ರಯಾಣಿಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2021, 6:32 IST
Last Updated 4 ಡಿಸೆಂಬರ್ 2021, 6:32 IST
ಚಿತ್ರ ಕೃಪೆ – @PLA_samrat ಟ್ವಿಟರ್ ಖಾತೆ
ಚಿತ್ರ ಕೃಪೆ – @PLA_samrat ಟ್ವಿಟರ್ ಖಾತೆ   

ಕಠ್ಮಂಡು: ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತ ಕಾರನ್ನೋ ಟೆಂಪೊವನ್ನೋ ಪ್ರಯಾಣಿಕರು ತಳ್ಳಿ ಬದಿಗೆ ಸರಿಸುವುದನ್ನು ನೋಡಿರುತ್ತೇವೆ. ಆದರೆ, ರನ್‌ವೇಯಿಂದ ವಿಮಾನವನ್ನೇ ತಳ್ಳಿ ಬದಿಗೆ ಸರಿಸಿದ್ದನ್ನು ಎಲ್ಲಾದರೂ ನೋಡಿದ್ದೀರಾ?

ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಇಂಥದ್ದೊಂದು ವಿದ್ಯಮಾನ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ಶೇರ್ ಆಗಿವೆ.

ಆಗಿದ್ದೇನು?: ತಾರಾ ಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಟೈರ್ ಸ್ಫೋಟಗೊಂಡ ಪರಿಣಾಮ ನೇಪಾಳದ ಬಾಜುರಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಾಕಿಯಾಗಿದೆ. ಲಘು ವಿಮಾನವನ್ನು ಪ್ರಯಾಣಿಕರು ತಳ್ಳಿ ಮುಂದಕ್ಕೆ ಸಾಗಿಸುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ADVERTISEMENT

ಮೊದಲು ‘ಟಿಕ್‌ಟಾಕ್‌’ನಲ್ಲಿ ಪ್ರಕಟಗೊಂಡಿದ್ದ ವಿಡಿಯೊವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ‘ಇದು ನೇಪಾಳದಲ್ಲಿ ಮಾತ್ರ ಸಾಧ್ಯವೇನೋ’ ಎಂದು ಹಾಸ್ಯಮಿಶ್ರಿತ ಸಂದೇಶವನ್ನೂ ಪ್ರಕಟಿಸಿದ್ದಾರೆ.

ಹಮ್ಲಾದ ಸಿಮ್‌ಕೋಟ್‌ನಿಂದ ತೆರಳಿದ್ದ ವಿಮಾನವು ಬಾಜುರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದಾಗ ಅದರ ಒಂದು ಚಕ್ರ ಸ್ಫೋಟಗೊಂಡಿತ್ತು. ಹೀಗಾಗಿ ವಿಮಾನವು ರನ್‌ವೇ ಮಧ್ಯದಲ್ಲೇ ಸಿಲುಕಿತ್ತು. ವಿಮಾನವನ್ನು ರನ್‌ವೇಯಿಂದ ಟ್ಯಾಕ್ಸಿವೇಗೆ ಎಳೆದುತರಲು ಯಾವುದೇ ತಾಂತ್ರಿಕ ವ್ಯವಸ್ಥೆ ಇಲ್ಲದ ಕಾರಣ ವಿಮಾನ ನಿಲ್ದಾಣ ಅಧಿಕಾರಿಗಳ ಜತೆ ಪ್ರಯಾಣಿಕರು ಕೈಜೋಡಿಸಿದರು ಎಂದು ತಾರಾ ಏರ್ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.