ಅಪಘಾತಕ್ಕೀಡಾದ ವಿಮಾನದ ಅವಶೇಷಗಳು
–ಪಿಟಿಐ ಚಿತ್ರ
ಸೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ರನ್‌ವೇನಿಂದ ಪಕ್ಕಕ್ಕೆ ಜಾರಿದ ವಿಮಾನವು ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದು ಸ್ಫೋಟಿಸಿದೆ. ವಿಮಾನದಲ್ಲಿದ್ದ 181 ಮಂದಿಯ ಪೈಕಿ 179 ಮಂದಿ ಜೀವ ಕಳೆದುಕೊಂಡಿದ್ದಾರೆ. ಜೆಜು ಏರ್ ವಿಮಾನಯಾನ ಕಂಪನಿಗೆ ಸೇರಿದ್ದ ವಿಮಾನ ಇದಾಗಿತ್ತು.
ವಿಮಾನವು ರನ್‌ವೇ ಮೇಲೆ ಇಳಿಯುವ ಸಂದರ್ಭದಲ್ಲಿ ಅದರ ಮುಂದಿನ ಚಕ್ರವು ಸರಿಯಾಗಿ ತೆರೆದುಕೊಂಡಿರಲಿಲ್ಲ ಎನ್ನಲಾಗಿದೆ. ಈ ದುರಂತವು ದಕ್ಷಿಣ ಕೊರಿಯಾದಲ್ಲಿ ನಡೆದ ಅತಿದೊಡ್ಡ ವಿಮಾನ ದುರಂತಗಳಲ್ಲಿ ಒಂದು.
ರಕ್ಷಣಾ ಸಿಬ್ಬಂದಿಯು ಇಬ್ಬರನ್ನು ವಿಮಾನ ದಿಂದ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಇವರಿಬ್ಬರೂ ವಿಮಾನದ ಸಿಬ್ಬಂದಿ ವರ್ಗಕ್ಕೆ ಸೇರಿ ದವರು. ಬೋಯಿಂಗ್ 737–800 ಮಾದರಿಯ ಈ ವಿಮಾನವು ಬ್ಯಾಂಕಾಕ್‌ನಿಂದ ಮರಳುತ್ತಿತ್ತು.
ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿ ಒಟ್ಟು 32 ಅಗ್ನಿಶಾಮಕ ಟ್ರಕ್‌ಗಳನ್ನು ಹಾಗೂ ಹಲವು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರು.
ವಿಮಾನವು, ರನ್‌ವೇ ದಾಟಿ ಕಾಂಕ್ರೀಟ್ ಗೋಡೆಯೊಂದಕ್ಕೆ ಗುದ್ದಿದ ದೃಶ್ಯಗಳನ್ನು ಹಲವು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ವಿಮಾನದ ಬಹುಭಾಗ ನಾಶವಾಗಿದೆ. ದುರಂತಕ್ಕೆ ಕಾರಣ ಏನು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಿಮಾನ ನಿಲ್ದಾಣ ನಿಯಂತ್ರಣ ಕೇಂದ್ರವು, ವಿಮಾನಕ್ಕೆ ಹಕ್ಕಿ ಬಡಿದಿರಬಹುದು ಎಂಬ ಎಚ್ಚರಿಕೆಯನ್ನು ಪೈಲಟ್‌ಗೆ ರವಾನಿಸಿತ್ತು ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ.
ಈ ವಿಮಾನವು ಬ್ಯಾಂಕಾಕ್‌ನ ಸುವರ್ಣ ಭೂಮಿ ವಿಮಾನ ನಿಲ್ದಾಣದಿಂದ ಹೊರಟಾಗ ಯಾವುದೇ ಸಮಸ್ಯೆಗಳು ಎದುರಾಗಿರಲಿಲ್ಲ ಎಂದು ಥಾಯ್ಲೆಂಡ್ ವಿಮಾನ ನಿಲ್ದಾಣಗಳ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೊನೆ ಮಾತುಗಳು?
ಜೆಜು ಏರ್ ವಿಮಾನದಲ್ಲಿ ಇದ್ದ ಪ್ರಯಾಣಿಕರೊಬ್ಬರು ಅಪಘಾತಕ್ಕೂ ತುಸು ಮೊದಲು ತಮ್ಮ ಕುಟುಂಬದ
ಸದಸ್ಯರೊಬ್ಬರಿಗೆ ಸಂದೇಶ ಕಳುಹಿಸಿದ್ದು, ‘ವಿಮಾನದ ರೆಕ್ಕೆಗೆ ಹಕ್ಕಿ ಬಡಿದಿದೆ’ ಎಂದು ತಿಳಿಸಿದ್ದರು ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
‘ನನ್ನ ಕೊನೆಯ ಮಾತುಗಳನ್ನು ಹೇಳಬೇಕೆ’ ಎಂದು ಕೂಡ ಆ ಪ್ರಯಾಣಿಕ ಸಂದೇಶ ಕಳುಹಿಸಿದ್ದರು ಎಂದು ವರದಿಯು ಉಲ್ಲೇಖಿಸಿದೆ.
ಕೆನಡಾ: ರನ್‌ವೇನಲ್ಲಿ ಜಾರಿದ ವಿಮಾನ
ಒಟ್ಟಾವಾ: ಕೆನಡಾ ದೇಶದ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ‘ಏರ್ ಕೆನಡಾ’ ವಿಮಾನವೊಂದು ರನ್‌ವೇನಲ್ಲಿ ಜಾರಿದೆ. ಇದರ ಪರಿಣಾಮವಾಗಿ ವಿಮಾನದ ಒಂದು ಭಾಗಕ್ಕೆ ಬೆಂಕಿ ಹತ್ತಿಕೊಂಡಿತ್ತು.
ವಿಮಾನದಲ್ಲಿ ಇದ್ದವರನ್ನು ರಕ್ಷಿಸಿ ವೈದ್ಯಕೀಯ ತಪಾಸಣೆಗೆ ಒಳ
ಪಡಿಸಲಾಯಿತು. ವಿಮಾನದಲ್ಲಿ ಎಷ್ಟು ಜನ ಇದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯ ನಂತರ ಹ್ಯಾಲಿಫ್ಯಾಕ್ಸ್
ವಿಮಾನ ನಿಲ್ದಾಣವನ್ನು ಶನಿವಾರ ರಾತ್ರಿ ತಾತ್ಕಾಲಿಕವಾಗಿ
ಸ್ಥಗಿತಗೊಳಿಸಲಾಗಿತ್ತು.
ವಿಮಾನವು ರನ್‌ವೇ ಮೇಲೆ ಇಳಿದ ಸಂದರ್ಭದಲ್ಲಿ ಒಂದು ಟೈರ್ ಸರಿಯಾಗಿ ತೆರೆದುಕೊಳ್ಳಲಿಲ್ಲ ಎಂದು ಪ್ರಯಾಣಿಕರೊಬ್ಬರು ‘ಸಿಬಿಸಿ ನ್ಯೂಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.