
(ಚಿತ್ರ ಕೃಪೆ–X/ @theinformant)
ಬೊಗೋಟಾ/ಕೊಲಂಬಿಯಾ: ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಬುಧವಾರ(ಜ.28) ವಿಮಾನವೊಂದು ಪತನಗೊಂಡಿದೆ. ದುರ್ಘಟನೆಯಲ್ಲಿ ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತನಗೊಂಡ ಸ್ಥಳದ ಬಗ್ಗೆ ಕುರಾಸಿಕಾ ಸಮುದಾಯದ ಜನ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಗಡಿ ನಗರ ಕುಕುಟಾದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 11:42ಕ್ಕೆ ಟೇಕಾಫ್ ಆಗಿತ್ತು. ಓಕಾನಾದಲ್ಲಿ ಇಳಿಯಬೇಕಿದ್ದ ಈ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.
ಕುಕುಟಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ನಿಮಿಷಗಳ ನಂತರ ಎಟಿಸಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು ಎಂದು ಸಟೇನಾ ಪ್ರಕಟಣೆಯಲ್ಲಿ ತಿಳಿಸಿದೆ.
ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ವಾಯುಯಾನ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ವಿಮಾನ. ಇದರಲ್ಲಿ 13 ಮಂದಿ ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅವರಲ್ಲಿ ಸಂಸದ 36 ವರ್ಷದ ಡೀಹೊಹೆನಸ್ ಕ್ವಿಂಟೆರೊ(Diógenes Quintero) ಮತ್ತು ಸಂಸದ ಸ್ಥಾನದ ಅಭ್ಯರ್ಥಿ ಕಾರ್ಲೋಸ್ ಸಾಲ್ಸೆಡೊ ಸೇರಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನದ ಅವಶೇಷ ಮತ್ತು ಮೃತ ದೇಹಗಳ ಪತ್ತೆಗೆ ಸರ್ಕಾರ ವಾಯುಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಪಘಾತಗೊಂಡ ಬಗ್ಗೆ ನಮಗೆ ಮಾಹಿತಿ ಬಂದಿದೆ. ದುರಂತಕ್ಕೀಡಾದ ವಿಮಾನದಲ್ಲಿ ನಮ್ಮ ಸಹೋದ್ಯೋಗಿ ಡಯಾಗೊನೆಸ್ ಕ್ವಿಂಟೆರೊ, ಮತ್ತು ಕಾರ್ಲೋಸ್ ಸಾಲ್ಸೆಡೊ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಸಂಸದ ವಿಲ್ಮರ್ ಕರಿಲೊ ಹೇಳಿದ್ದಾರೆ.
ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ, ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಈ ಸಾವುಗಳಿಂದ ನನಗೆ ತುಂಬಾ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.