ADVERTISEMENT

ಈಗ ಸಣ್ಣ ದೇಶಗಳೇ ಐಎಸ್‌ಐಎಸ್‌ ಗುರಿ: ಶ್ರೀಲಂಕಾ ಅಧ್ಯಕ್ಷ 

ಏಜೆನ್ಸೀಸ್
Published 3 ಮೇ 2019, 15:58 IST
Last Updated 3 ಮೇ 2019, 15:58 IST
   

ಕೊಲೊಂಬೋ:ಜಗತ್ತಿನ ಸಣ್ಣ ಸಣ್ಣ ರಾಷ್ಟ್ರಗಳನ್ನು ಗುರಿ ಮಾಡಿ ಐಎಸ್‌ಐಎಸ್‌ ಉಗ್ರ ಸಂಘಟನೆ ದಾಳಿ ನಡೆಸುವ ಕಾರ್ಯತಂತ್ರವನ್ನು ಅನುಸರಿಸುತ್ತಿರುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಬುಧವಾರ ಹೇಳಿದ್ದಾರೆ.

ಶ್ರೀಲಂಕಾದ ಸುದ್ದಿ ವಾಹಿನಿ ‘ಸ್ಕೈ ನ್ಯೂಸ್‌’ನೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಮೈತ್ರಿಪಾಲ ಸಿರಿಸೇನಾ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಈಸ್ಟರ್‌ ಹಬ್ಬದಂದು ಶ್ರೀಲಂಕಾದ ಕೊಲೊಂಬೋದಲ್ಲಿ ಚರ್ಚ್‌ ಮತ್ತು ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಸರಣಿ ಆತ್ಮಾಹುತಿ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಮೂರು ದಿನಗಳ ನಂತರ ದಾಳಿಯ ಹೊಣೆಯನ್ನು ಐಎಸ್‌ಐಎಸ್‌ ಹೊತ್ತಿತ್ತು. ಇದೇ ಹಿನ್ನೆಲೆಯಲ್ಲಿ ಸಿರಿಸೇನಾ ಅವರುಐಎಸ್‌ಐಎಸ್‌ನ ಬದಲಾದ ಕಾರ್ಯ ವಿಧಾನಗಳ ಬಗ್ಗೆ ಮಾತನಾಡಿದ್ದಾರೆ.

ADVERTISEMENT

ಇದೇ ವೇಳೆ ದೇಶದಲ್ಲಿ ರಹಸ್ಯವಾಗಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ದಶಕದಿಂದ ಈಚೆಗೆ ವಿದೇಶಕ್ಕೆ ತೆರಳಿ ಅಲ್ಲಿ ಐಎಸ್‌ ಸಂಘಟನೆಯಿಂದ ತರಬೇತು ಪಡೆದು ಬಂದ ಸಣ್ಣ ಸಣ್ಣ ಗುಂಪುಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆ,’ ಎಂದು ಅವರು ಹೇಳಿದ್ದಾರೆ.

‘ಕೊಲೊಂಬೋದಲ್ಲಿ ಏ.21ರಂದು ನಡೆದಿದ್ದು ಸಹಭಾಗಿ ಭಯೋತ್ಪಾದನಾ ದಾಳಿ. ಸ್ಥಳೀಯವಾಗಿಯೇ ತಯಾರಾದ ಸ್ಫೋಟಗಳನ್ನು ದಾಳಿಗೆ ಬಳಸಲಾಗಿತ್ತು. ದಾಳಿ ನಡೆದ ಸ್ಥಳದಲ್ಲಿ ಪತ್ತೆಯಾದ ಸ್ಫೋಟಕಗಳು ಮತ್ತು ನಂತರದಲ್ಲಿ ನಿಷ್ಕ್ರಿಯಗೊಳಿಸಲಾದ ಬಾಂಬ್‌ಗಳ ಅಧ್ಯಯನದಿಂದ ಇದು ಬಹಿರಂಗವಾಗಿದೆ,’ ಎಂದು ಅವರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಮತ್ತಷ್ಟು ದಾಳಿ ನಡೆಸಲು ಐಎಸ್‌ ಸಂಘಟನೆ ಕಾರ್ಯ ನಿರತವಾಗಿರುವ ಬಗ್ಗೆ ಅಮೆರಿಕ ಸಹ ಈಗಾಗಲೇ ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.