ADVERTISEMENT

ನೆತನ್ಯಾಹು ಪ್ರಚಾರದ ಪೋಸ್ಟರ್‌ನಲ್ಲಿ ಮೋದಿ

ಪಿಟಿಐ
Published 29 ಜುಲೈ 2019, 20:05 IST
Last Updated 29 ಜುಲೈ 2019, 20:05 IST
ಲಿಕಡ್ ಪಕ್ಷದ ಕೇಂದ್ರ ಕಚೇರಿ ಹೊರಭಾಗದಲ್ಲಿ ಹಾಕಲಾಗಿರುವ ಪೋಸ್ಟರ್‌ನಲ್ಲಿ ನೆತನ್ಯಾಹು ಹಾಗೂ ಪ್ರಧಾನಿ ಮೋದಿ –ಪಿಟಿಐ ಚಿತ್ರ
ಲಿಕಡ್ ಪಕ್ಷದ ಕೇಂದ್ರ ಕಚೇರಿ ಹೊರಭಾಗದಲ್ಲಿ ಹಾಕಲಾಗಿರುವ ಪೋಸ್ಟರ್‌ನಲ್ಲಿ ನೆತನ್ಯಾಹು ಹಾಗೂ ಪ್ರಧಾನಿ ಮೋದಿ –ಪಿಟಿಐ ಚಿತ್ರ   

ಟೆಲ್ ಅವಿವ್: ಇಸ್ರೇಲ್‌ನಲ್ಲಿ ಅವಧಿಗೂ ಮುನ್ನ ನಡೆಯುತ್ತಿರುವ ಚುನಾವಣೆಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪಕ್ಷ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೆತನ್ಯಾಹು ಜತೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಟೆಲ್‌ ಅವಿವ್‌ನಲ್ಲಿರುವ ಲಿಕಡ್ ಪಕ್ಷದ ಕೇಂದ್ರ ಕಚೇರಿ ಕಟ್ಟಡದ ಹೊರಗೆ ನೆತನ್ಯಾಹು ಅವರು ಜಾಗತಿಕ ನಾಯಕರ ಜತೆಗೆ ಇರುವ ಪೋಸ್ಟರ್‌ಗಳನ್ನು ಹಾಕಲಾಗಿದೆ. ಪೋಸ್ಟರ್‌ನ ಮೇಲ್ಭಾಗದಲ್ಲಿ ಹೀಬ್ರೂ ಭಾಷೆಯಲ್ಲಿ ‘ನೆತನ್ಯಾಹು ವಿಭಿನ್ನ ಬಣದಲ್ಲಿ’ ಎಂದು ಮುದ್ರಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಮೋದಿ ಜತೆಗೆ ನೆತನ್ಯಾಹು ಆತ್ಮೀಯ ಬಾಂಧವ್ಯ ಹೊಂದಿರುವುದನ್ನು ತೋರಿಸಿ, ಇಸ್ರೇಲ್ ರಾಜಕಾರಣದಲ್ಲಿಯೇ ಅವರಿಗೆ ಸರಿಸಾಟಿಯಾದ ನಾಯಕರಿಲ್ಲ ಎನ್ನುವುದನ್ನು ಪ್ರಚಾರ ಮಾಡುವುದು ಪಕ್ಷದ ಉದ್ದೇಶವಾಗಿದೆ.

ADVERTISEMENT

ಈ ಮೂಲಕ ದೇಶದ ಭದ್ರತೆ ದೃಷ್ಟಿಯಿಂದ ನೆತನ್ಯಾಹು ನಾಯಕತ್ವ ಮಹತ್ವದ್ದು ಎಂದು ಸಾಬೀತುಪಡಿಸುವ ತಂತ್ರ ರೂಪಿಸಲಾಗಿದೆ. ಸೆಪ್ಟೆಂಬರ್ 9ರಂದು ನೆತನ್ಯಾಹು ಅವರು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಸೆ.17ರಂದು ಇಸ್ರೇಲ್‌ನಲ್ಲಿ ಮರುಚುನಾವಣೆ ನಡೆಯಲಿದೆ.

ದೇಶದಲ್ಲಿಯೇ ದೀರ್ಘಾವಧಿಗೆ ಆಡಳಿತ ನಡೆಸಿದ ಪ್ರಧಾನಿ ಎಂದು ಜುಲೈ 20ಕ್ಕೆ ದಾಖಲೆ ಬರೆದ ನೆತನ್ಯಾಹು, ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಶಂಕೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರ ಹೆಸರು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.