ನವದೆಹಲಿ: ಕುವೈತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳನ್ನು ಅರೇಬಿಕ್ ಭಾಷೆಗೆ ಅನುವಾದಿಸಿದ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನೆಸೆಫ್ ಅವರನ್ನು ಭೇಟಿ ಮಾಡಿದ್ದಾರೆ.
ಇದೇ ವೇಳೆ ಎರಡು ಮಹಾಕಾವ್ಯಗಳ ಅನುವಾದಿತ ಆವೃತ್ತಿಗಳ ಪ್ರತಿಗಳಿಗೆ ಹಸ್ತಾಕ್ಷರ ಹಾಕಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ‘ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಅನುವಾದ ಕಂಡು ಸಂತೋಷವಾಯಿತು. ಈ ಕೃತಿಗಳನ್ನು ಭಾಷಾಂತರಿಸಲು ಮತ್ತು ಪ್ರಕಟಿಸಲು ಶ್ರಮಿಸಿದ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನೆಸೆಫ್ ಅವರನ್ನು ಅಭಿನಂದಿಸುತ್ತೇನೆ. ಅವರ ಈ ಉಪಕ್ರಮವು ಜಾಗತಿಕವಾಗಿ ಭಾರತೀಯ ಸಂಸ್ಕೃತಿಯ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಹೇಳಿದ್ದಾರೆ.
ಕುವೈತ್‌ನ ಅಮೀರ್ ಶೇಖ್ ಮೆಶಾಲ್ ಅಲ್ ಅಹ್ಮದ್ ಅಲ್ ಜಬೇರ್ ಅಲ್ ಸಬ್ಹಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಕುವೈತೆಗೆ ತೆರಳಿದ್ದ ಮೋದಿ ಅವರಿಗೆ ಅಲ್ಲಿನ ಭಾರತೀಯ ಸಮುದಾಯದವರು ಹೃತ್ಪೂರ್ವಕ ಸ್ವಾಗತ ಕೋರಿದ್ದರು.
ಪ್ರಧಾನಿ ಮೋದಿ ಅವರು 43 ವರ್ಷಗಳ ಬಳಿಕ ಕುವೈತ್‌ಗೆ ಭೇಟಿ ನೀಡಿದ್ದಾರೆ. 1981ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕುವೈತ್‌ಗೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.