ADVERTISEMENT

ಜಿ–7 | ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಅಗತ್ಯ: ಪ್ರಧಾನಿ ಮೋದಿ ಪ್ರತಿಪಾದನೆ

ಜಿ–7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಪಿಟಿಐ
Published 21 ಮೇ 2023, 11:31 IST
Last Updated 21 ಮೇ 2023, 11:31 IST
ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ–7 ಶೃಂಗಸಭೆ ಸಂದರ್ಭದಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು –ಎಪಿ/ಪಿಟಿಐ ಚಿತ್ರ
ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ–7 ಶೃಂಗಸಭೆ ಸಂದರ್ಭದಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು –ಎಪಿ/ಪಿಟಿಐ ಚಿತ್ರ    

ಹಿರೋಷಿಮಾ (ಜಪಾನ್)(ಪಿಟಿಐ): ವಿಶ್ವಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳಲ್ಲಿ ಸುಧಾರಣೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಲವಾಗಿ ಪ್ರತಿಪಾದಿಸಿದರು.

ಇಲ್ಲಿ ನಡೆಯುತ್ತಿರುವ ಜಿ–7 ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ವಿಶ್ವಸಂಸ್ಥೆ ಅಥವಾ ಭದ್ರತಾ ಮಂಡಳಿಯು ಪ್ರಸಕ್ತ ಜಗತ್ತಿನ ವಾಸ್ತವಿಕತೆಯನ್ನು ಪ್ರತಿಬಿಂಬಿಸದೇ ಹೋದಲ್ಲಿ ಈ ಸಂಸ್ಥೆಗಳು ‘ಮಾತಿನ ಮಂಟಪ’ಗಳಾಗಿ ಉಳಿಯುತ್ತವೆ’ ಎಂದರು.

‘ಜಗತ್ತಿನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ವಿಷಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಉದ್ದೇಶದಿಂದಲೇ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಆದರೆ, ಶಾಂತಿ ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳಲು ಬೇರೆ ಬೇರೆ ವೇದಿಕೆಗಳನ್ನು ರಚಿಸಿದ್ದು ಯಾಕೆ’ ಎಂದು ಮೋದಿ ಅಚ್ಚರಿವ್ಯಕ್ತಪಡಿಸಿದರು.

ADVERTISEMENT
ವಿಶ್ವದ ದಕ್ಷಿಣ ಭಾಗದ ರಾಷ್ಟ್ರಗಳ ದನಿಯಾಗಿಯೂ ವಿಶ್ವಸಂಸ್ಥೆ ಹಾಗೂ ಭದ್ರತಾಮಂಡಳಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಸಂಘರ್ಷಗಳಿಗೆ ಕೊನೆ ಹಾಡುವ ಕುರಿತು ನಾವು ಮಾತನಾಡುತ್ತಲೇ ಇರುತ್ತೇವೆ.
ನರೇಂದ್ರ ಮೋದಿ ಪ್ರಧಾನಿ

‘ಜಗತ್ತಿನಲ್ಲಿ ಸದ್ಯ ಕಂಡುಬರುತ್ತಿರುವ ಸಂಘರ್ಷಗಳನ್ನು ತಡೆಯುವಲ್ಲಿ ವಿಶ್ವಸಂಸ್ಥೆ ಏಕೆ ಯಶಸ್ವಿಯಾಗಿಲ್ಲ’ ಎಂದೂ ಪ್ರಶ್ನಿಸಿದ ಮೋದಿ, ಈ ವಿಷಯ ಕುರಿತು ಆಳವಾದ ವಿಶ್ಲೇಷಣೆ ಅಗತ್ಯವಿದೆ ಎಂದರು.

ಮೋದಿ–ಸುನಕ್‌ ಭೇಟಿ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳ ವೃದ್ಧಿ ಕುರಿತು ಅರ್ಥಪೂರ್ಣ ಮಾತುಕತೆ ನಡೆಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

‘ಭಾರತ–ಬ್ರಿಟನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿ ಹಾಕುವ ನಿಟ್ಟಿನಲ್ಲಿ ಆಗಿರುವ ಪ್ರಗತಿ, ಹೂಡಿಕೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಭಾಗಿತ್ವ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್‌ ಮಾಡಿದೆ.

ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಜಿ–7 ಶೃಂಗಸಭೆ ಸಂದರ್ಭದಲ್ಲಿ ಭಾನುವಾರ ಭೇಟಿಯಾದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ತಬ್ಬಿಕೊಂಡು ಗಮನ ಸೆಳೆದರು –ಎಪಿ/ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.