ADVERTISEMENT

ನಾನು ಹುಟ್ಟಿದ ದಿನವೇ ಇಸ್ರೇಲ್ ದೇಶ ಘೋಷಣೆಯಾಯಿತು: ಪ್ರಧಾನಿ ಮೋದಿ

ಏಜೆನ್ಸೀಸ್
Published 26 ಫೆಬ್ರುವರಿ 2026, 4:49 IST
Last Updated 26 ಫೆಬ್ರುವರಿ 2026, 4:49 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಜೆರುಸಲೇಂ: ‘ನಾನು ಹುಟ್ಟಿದ ದಿನವೇ ಇಸ್ರೇಲ್ ದೇಶ ಘೋಷಣೆಯಾಯಿತು’ ಎಂದು ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್‌ ಸಂಸತ್ತು ‘ಕನೆಸೆಟ್’ ಉದ್ದೇಶಿಸಿ ಮಾತನಾಡಿದ ಅವರು, ‘ಒಂಬತ್ತು ವರ್ಷಗಳ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗುವ ಅದೃಷ್ಟ ನನಗೆ ಸಿಕ್ಕಿತ್ತು. ನಾನು ಯಾವಾಗಲೂ ಆಕರ್ಷಿತನಾಗುತ್ತಿದ್ದ ಭೂಮಿಗೆ ಮತ್ತೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ವಿಶೇಷವೆಂದರೆ, 1950ರ ಸೆಷ್ಟಂಬರ್‌ 17ರಂದು ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನವೇ ನಾನು ಜನಿಸಿದ್ದು’ ಎಂದು ಅವರು ಹೇಳಿದ್ದಾರೆ.

ADVERTISEMENT

2023ರ ಅಕ್ಟೋಬರ್‌ 7ರಂದು ಹಮಾಸ್‌ ನಡೆಸಿದ ದಾಳಿಯ ನಂತರ ಭಾರತವು ‘ಪೂರ್ಣ ದೃಢನಿಶ್ಚಯ’ದೊಂದಿಗೆ ಇಸ್ರೇಲ್‌ ಜತೆ ನಿಂತಿದೆ ಎಂದು ಮೋದಿ ಅವರು ಇಸ್ರೇಲ್‌ ಸಂಸದರಿಗೆ ತಿಳಿಸಿದ್ದಾರೆ.

‘ಹಮಾಸ್ ನಡೆಸಿದ ಬರ್ಬರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಮತ್ತು ಪ್ರತಿಯೊಂದು ಸಂತ್ರಸ್ತ ಕುಟುಂಬಕ್ಕೂ ಭಾರತೀಯರ ಪರವಾಗಿ ಸಂತಾಪ ಸೂಚಿಸುವೆ’ ಎಂದು ಹೇಳಿದ್ದಾರೆ. ‘ನಿಮ್ಮ ನೋವು, ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಈ ಕ್ಷಣದಲ್ಲಿ ಮತ್ತು ಮುಂದೆಯೂ ಭಾರತವು ದೃಢನಿಶ್ಚಯದಿಂದ ಇಸ್ರೇಲ್‌ ಜತೆ ನಿಂತಿದೆ’ ಎಂದಿದ್ದಾರೆ.

ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರಂತರ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದಿರುವ ಅವರು, ಭಯೋತ್ಪಾದನೆಯು ವಿಶ್ವದೆಲ್ಲೆಡೆ ಶಾಂತಿಗೆ ಧಕ್ಕೆ ತರುತ್ತದೆ. ಆದ್ದರಿಂದ ಭಾರತವು ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

‘ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲ್‌ ನಾಗರಿಕರು ಸೇರಿದಂತೆ ಅಮಾಯಕರು ಬಲಿಯಾದ ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಇಸ್ರೇಲ್‌ನಂತೆಯೇ, ಭಾರತವೂ ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ಈ ವಿಷಯದಲ್ಲಿ ಇಬ್ಬಗೆ ನೀತಿಗೆ ಅವಕಾಶವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.