ADVERTISEMENT

2070ಕ್ಕೆ ಭಾರತದಿಂದ ನೆಟ್‌ ಝೀರೋ ಗುರಿ: ಪ್ರಧಾನಿ ನರೇಂದ್ರ ಮೋದಿ

ಗ್ಲಾಸ್ಗೋ ಹವಾಮಾನ ವೈಪರೀತ್ಯ ತಡೆ ಸಮಾವೇಶ l ಪ್ರಧಾನಿ ನರೇಂದ್ರ ಮೋದಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 22:15 IST
Last Updated 2 ನವೆಂಬರ್ 2021, 22:15 IST
 ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಗ್ಲಾಸ್ಗೋ (ಪಿಟಿಐ): ‘ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವ ನೆಟ್‌ ಝೀರೋ ಗುರಿಯನ್ನು ಭಾರತವು 2070ಕ್ಕೆ ತಲುಪಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಘೋಷಿಸಿದ್ದಾರೆ.

ಅಮೆರಿಕ ಮತ್ತು ಐರೋಪ್ಯ ದೇಶಗಳು 2050ರ ವೇಳೆಗೆ ನೆಟ್ ಝೀರೊ ಗುರಿಯನ್ನು ತಲುಪುವುದಾಗಿ ಹೇಳಿದ್ದರೆ, ಚೀನಾವು 2060ಕ್ಕೆ ಈ ಗುರಿ ತಲುಪುವುದಾಗಿ ಹೇಳಿದೆ. ಭಾರತವು ಈ ಗುರಿ ತಲುಪಲು ಇನ್ನೂ 10 ವರ್ಷ ಹೆಚ್ಚುವರಿ ಸಮಯಾವಕಾಶ ತೆಗೆದುಕೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಈ ಗುರಿ ಹಾಕಿಕೊಂಡ ಮೊದಲ ದೇಶ ಭಾರತವಾಗಿದೆ. 2015ರ ಪ್ಯಾರಿಸ್ ಶೃಂಗಸಭೆಯಲ್ಲಿ ಹಾಕಿಕೊಂಡಿದ್ದ ಗುರಿಗಳನ್ನು ಪೂರ್ಣಪ್ರಮಾಣದಲ್ಲಿ ತಲುಪುವಲ್ಲಿ ಭಾರತವು ವಿಫಲವಾಗಿದೆ. ಹೀಗಾಗಿ ಈ ನೂತನ ಕಾರ್ಯಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ನೆಟ್‌ ಝೀರೋ ಗುರಿಯನ್ನು ತಲುಪಲು ಅವಕಾಶ ಮಾಡಿಕೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

‘2070ರ ವೇಳೆಗೆ ಭಾರತವು ನೆಟ್‌ ಝೀರೊ ಗುರಿ ತಲುಪಲು ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ನೆರವು ನೀಡಬೇಕಿದೆ. ಇದಕ್ಕಾಗಿ ಅಭಿವೃದ್ಧಿಶೀಲ ದೇಶಗಳು ₹75 ಲಕ್ಷ ಕೋಟಿ (1 ಲಕ್ಷ ಕೋಟಿ ಡಾಲರ್) ನೆರವು ನೀಡಬೇಕಿದೆ. ಆದರೆ ಈವರೆಗೆ ಆರ್ಥಿಕ ನೆರವು ನೀಡುವುದಾಗಿ ಶ್ರೀಮಂತ ದೇಶಗಳು ನೀಡಿದ್ದ ಭರವಸೆಗಳು ಟೊಳ್ಳು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಈಗ ಈ ಗುರಿಯನ್ನು ತಲುಪಲು, ಒಂದೊಂದೇ ಮೈಲುಗಲ್ಲು ಮುಟ್ಟಿದಂತೆ ಆರ್ಥಿಕ ನೆರವು ಹರಿದುಬರಬೇಕು’ ಎಂದು ಮೋದಿ ಒತ್ತಾಯಿಸಿದ್ದಾರೆ.

ಮೋದಿ ಅವರು ಈ ಗುರಿಯನ್ನು ಘೋಷಿಸುವ ಮೂಲಕ, ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಒತ್ತಡ ಸೃಷ್ಟಿಸಲು ಯತ್ನಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಈಗ ಆರ್ಥಿಕ ನೆರವು ನೀಡಲೇಬೇಕಾದ ಒತ್ತಡದ ಪರಿಸ್ಥಿತಿಗೆ ಸಿಲುಕಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಧಾನಿ ಮೋದಿ ಅವರು ಗ್ಲಾಸ್ಗೋ ಸಮಾವೇಶದಲ್ಲಿ ನೇಪಾಳ ಪ್ರಧಾನಿ ಮತ್ತು ಇಸ್ರೇಲ್ ಪ್ರಧಾನಿಯ ಜತೆಗೆ ಮಾತುಕತೆ ನಡೆಸಿದರು. ಗೇಟ್ಸ್ ಪ್ರತಿಷ್ಠಾನದ ಬಿಲ್‌ ಗೇಟ್ಸ್ ಅವರ ಜತೆಯೂ ಮೋದಿ ಮಾತುಕತೆ ನಡೆಸಿದರು.

ಮೋದಿ ಘೋಷಣೆಗಳು

2030ರ ವೇಳೆಗೆ ದೇಶದಲ್ಲಿ 450-500 ಗಿಗಾವಾಟ್‌ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು

2030ರ ವೇಳೆಗೆ ದೇಶಕ್ಕೆ ಅಗತ್ಯವಿರುವ ವಿದ್ಯುತ್‌ನಲ್ಲಿ ಶೇ 50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು

2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೇ 45ರಷ್ಟು ಕಡಿತ ಮಾಡಲಾಗುವುದು (ಈ ಹಿಂದೆ 2030ರ ವೇಳೆಗೆ ಶೇ 35ರಷ್ಟು ಕಡಿತ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು

2030ರ ವೇಳೆಗೆ ರೈಲ್ವೆಯ ಇಂಗಾಲ ಹೊರಸೂಸುವಿಕೆಯನ್ನು ಶೇ 100ರಷ್ಟು ಕಡಿತ ಮಾಡಲಾಗುವುದು. ಇದರಿಂದ ವಾರ್ಷಿಕ 6 ಕೋಟಿ ಟನ್ ಇಂಗಾಲದ ಮಾಲಿನ್ಯ ಕಡಿಮೆಯಾಗಲಿದೆ

2030ರ ವೇಳೆಗೆ ಭಾರತದ ವಾರ್ಷಿಕ ಇಂಗಾಲ ಹೊರಸೂಸುವಿಕೆಯಲ್ಲಿ 100 ಕೋಟಿಟನ್‌ನಷ್ಟು ಕಡಿಮೆ ಮಾಡಲಾಗುವುದು.

ದ್ವೀಪ ರಾಷ್ಟ್ರಗಳಿಗೆ ನೆರವು

ಹವಾಮಾನ ಬದಲಾವಣೆಯಿಂದ ಅಪಾಯ ಎದುರಿಸುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳ ನೆರವಿಗಾಗಿ ಭಾರತವು ‘ರೆಸಿಲಿಯಂಟ್ ಐಲ್ಯಾಂಡ್ ಸ್ಟೇಟ್ಸ್’ (ಐಆರ್‌ಐಎಸ್‌) ಕಾರ್ಯಕ್ರಮಕ್ಕೆ ಇಲ್ಲಿ ಚಾಲನೆ ನೀಡಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಹವಾಮಾನ ಬದಲಾವಣೆಯಿಂದ ಹೆಚ್ಚು ಅಪಾಯ ಎದುರಿಸುತ್ತಿರುವುದು ಸಣ್ಣ ದ್ವೀಪ ರಾಷ್ಟ್ರಗಳು. ಈ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಡೆಗಟ್ಟಲು ದೊಡ್ಡ ರಾಷ್ಟ್ರಗಳು ಶ್ರಮಿಸಬೇಕಿದೆ’ ಎಂದು ಕರೆ ನೀಡಿದ್ದಾರೆ.

ಈ ದೇಶಗಳಲ್ಲಿ ಚಂಡಮಾರುತದ ಮಾಹಿತಿ, ಹವಳದ ದಿಬ್ಬಗಳ ಮೇಲ್ವಿಚಾರಣೆ, ಕರಾವಳಿ ಮೇಲ್ವಿಚಾರಣೆಗೆ ನೆರವು ನೀಡಲೆಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರತ್ಯೇಕ ಘಟಕವನ್ನು ಆರಂಭಿಸಿದೆ ಎಂದು ಮೋದಿ ಹೇಳಿದ್ದಾರೆ. ಐಆರ್‌ಐಎಸ್‌ ಕಾರ್ಯಕ್ರಮವನ್ನು ಭಾರತ ಮತ್ತು ಬ್ರಿಟನ್ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತದೆ.

ಗುರಿ ತಲುಪುವ ಹಾದಿ

ಭಾರತವು 2070ರ ವೇಳೆಗೆ ನೆಟ್ ಝೀರೊ ಗುರಿ ತಲುಪಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಶೇ 99.99ರಷ್ಟು ಕಡಿತಗೊಳಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಈ ಗುರಿ ತಲುಪಲು ಏನೆಲ್ಲಾ ಮಾಡಬೇಕು ಎಂಬುದನ್ನು ದೆಹಲಿಯ ‘ಕೌನ್ಸಿಲ್ ಆನ್ ಎನರ್ಜಿ, ಎನ್‌ವಿರಾನ್‌ಮೆಂಟ್‌ ಅಂಡ್ ವಾಟರ್’ ಸಂಘಟನೆಯು ಪಟ್ಟಿ ಮಾಡಿದೆ.

ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು 2050ರ ವೇಳೆಗೆ 1,689 ಗಿಗಾವಾಟ್, 2070ರ ವೇಳೆಗೆ 5,630 ಗಿಗಾವಾಟ್‌ಗೆ ಹೆಚ್ಚಿಸಬೇಕು.

ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2050ರ ವೇಳೆಗೆ 557 ಗಿಗಾವಾಟ್ ಮತ್ತು 2070ರ ವೇಳೆಗೆ 1,792 ಗಿಗಾವಾಟ್‌ಗಳಿಗೆ ಹೆಚ್ಚಿಸಬೇಕು.

2070ರ ವೇಳೆಗೆ ದೇಶದ ಶೇ 79ರಷ್ಟು ಟ್ರಕ್‌ಗಳು ವಿದ್ಯುತ್ ಚಾಲಿತವಾಗಿರಬೇಕು. ಶೇ 21ರಷ್ಟು ಟ್ರಕ್‌ಗಳು ಜಲಜನಕದ ಸೆಲ್‌ ಚಾಲಿತವಾಗಿರಬೇಕು.

2070ರ ವೇಳೆಗೆ ಕಾರು, ಟ್ರಕ್, ಬಸ್‌ ಮತ್ತು ವಿಮಾನಗಳಲ್ಲಿ ಬಳಕೆಯಾಗುವ ಇಂಧನದಲ್ಲಿ ಶೇ 84ರಷ್ಟು ಜೈವಿಕ ಇಂಧನವಾಗಿರಬೇಕು.

ಕೈಗಾರಿಕಾ ವಲಯದಲ್ಲಿ ಕಲ್ಲಿದ್ದಲು ಬಳಕೆ ಪ್ರಮಾಣವು 2040ರಿಂದ ಇಳಿಕೆಯಾಗಬೇಕು ಮತ್ತು 2065ರ ವೇಳೆಗೆ ಶೇ 97ರಷ್ಟು ಕಡಿಮೆಯಾಗಬೇಕು.

ಕಚ್ಚಾತೈಲ ಬಳಕೆ ಪ್ರಮಾಣವು 2050-2070ರ ಮಧ್ಯ ಶೇ 90ರಷ್ಟು ಕಡಿಮೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.