ADVERTISEMENT

ಪಾಕ್‌ ಪ್ರಧಾನಿ ಅಭ್ಯರ್ಥಿಯಾಗಿ ನವಾಜ್‌ ಷರೀಫ್ ತಮ್ಮ ಶೆಹಬಾಜ್‌ ನಾಮಪತ್ರ ಸಲ್ಲಿಕೆ

ಪಿಟಿಐ
Published 10 ಏಪ್ರಿಲ್ 2022, 11:46 IST
Last Updated 10 ಏಪ್ರಿಲ್ 2022, 11:46 IST
ಪಾಕ್‌ ಪ್ರಧಾನಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನವಾಜ್‌ ಷರೀಫ್‌ ತಮ್ಮ ಶೆಹಬಾಜ್‌
ಪಾಕ್‌ ಪ್ರಧಾನಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನವಾಜ್‌ ಷರೀಫ್‌ ತಮ್ಮ ಶೆಹಬಾಜ್‌   

ಇಸ್ಲಾಮಾಬಾದ್: ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಪ್ರಧಾನಿ ಅಭ್ಯರ್ಥಿಯಾಗಿ ಸ್ವತಃ ಘೋಷಿಸಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮತದಾನದ ಮೂಲಕ ಪ್ರಧಾನಿ ಇಮ್ರಾನ್‌ ಖಾನ್‌ ಪದಚ್ಯುತಗೊಂಡರು.

ಪ್ರತಿಪಕ್ಷದ ನಾಯಕ ಶೆಹಬಾಜ್‌ ಷರೀಫ್‌ (70) ಅವರು ಸಂಸತ್ತಿನ ನಾಯಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದಾಗಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ. ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ತಮ್ಮ ಶೆಹಬಾಜ್.

ಟ್ವೀಟ್‌ ಮಾಡಿರುವ ಶೆಹಬಾಜ್‌, 'ಮಾಧ್ಯಮ, ಸಮಾಜ, ವಕೀಲರು, ನನ್ನ ನಾಯಕ ನವಾಜ್‌ ಷರೀಫ್‌, ಆಸಿಫ್‌ ಝರ್ದಾರಿ, ಮೌಲಾನಾ ಫಝಲ್‌–ಉರ್‌–ರೆಹಮಾನ್‌, ಬಿಲಾವಲ್‌ ಭುಟ್ಟೊ, ಖಾಲಿದ್‌ ಮಕ್ಬೂಲ್‌, ಖಾಲಿದ್ ಮಗಸಿ, ಮೋಸಿನ್‌ ದವಾರ್‌, ಅಲಿ ವಾಝಿರ್‌, ಅಮಿರ್‌ ಹೈದರ್‌ ಹೋಟಿ ಹಾಗೂ ಸಂವಿಧಾನದ ಪರವಾಗಿ ನಿಂತ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ವಿಶೇಷ ಧನ್ಯವಾದಗಳು' ಎಂದು ಪ್ರಕಟಿಸಿದ್ದಾರೆ.

ADVERTISEMENT

ಇತ್ತೀಚೆಗೆ ವಿರೋಧ ಪಕ್ಷಗಳ ಜಂಟಿ ಸಭೆಯಲ್ಲಿ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಮುಖಂಡ ಮತ್ತು ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಝರ್ದಾರಿ ಅವರು ಪ್ರಧಾನಿ ಸ್ಥಾನಕ್ಕೆ ಶೆಹಬಾಜ್‌ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ಇಮ್ರಾನ್‌ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷವು ಪ್ರಧಾನಿ ಅಭ್ಯರ್ಥಿಯಾಗಿ ಮಾಜಿ ವಿದೇಶಾಂಗ ಸಚಿವ ಶಾಹ್‌ ಮೆಹಬೂದ್‌ ಖುರೇಷಿ (65) ಅವರನ್ನು ಆಯ್ಕೆ ಮಾಡಿದೆ.

ಪ್ರಧಾನಿ ಸ್ಥಾನಕ್ಕೆ ನಾಮನಿರ್ದೇಶನ ಸಲ್ಲಿಸಲು ಸಂಸತ್ತಿನ ಆಡಳಿತ ಕಚೇರಿಯು ನಿಗದಿತ ಸಮಯ ಪ್ರಕಟಿಸಿತ್ತು.

342 ಸದಸ್ಯ ಬಲದ ಸಂಸತ್‌ನಲ್ಲಿ ಭಾನುವಾರ ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಗೊಂಡವು. ಇದರೊಂದಿಗೆ ಇಮ್ರಾನ್‌ ಪ್ರಧಾನಿ ಸ್ಥಾನದಿಂದ ಹೊರ ನಡೆಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.