ADVERTISEMENT

ಭಾರತ– ಪಾಕ್‌ ಮಧ್ಯೆ ಅಣ್ವಸ್ತ್ರ ಯುದ್ಧ ತಪ್ಪಿಸಿದ್ದು ಅಮೆರಿಕ: ‍ಪಾಂಪಿಯೊ

‘ನೆವರ್‌ ಗೀವ್‌ ಆನ್‌ ಇಂಚ್‌’ ಪುಸ್ತಕದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಲ್ಬಣ ಪ್ರಸ್ತಾಪ

ಏಜೆನ್ಸೀಸ್
Published 25 ಜನವರಿ 2023, 12:14 IST
Last Updated 25 ಜನವರಿ 2023, 12:14 IST
ಮೈಕ್‌ ಪಾಂಪಿಯೊ
ಮೈಕ್‌ ಪಾಂಪಿಯೊ   

ವಾಷಿಂಗ್ಟನ್‌ : ‘ಭಾರತ ಮತ್ತು ಪಾಕಿಸ್ತಾನ 2019ರ ಫೆಬ್ರುವರಿಯಲ್ಲಿ ಅಣ್ವಸ್ತ್ರ ಸಮರದ ಹಂತಕ್ಕೆ ತಲುಪಿದ್ದವು. ಆಗ ಅಮೆರಿಕ ಮಧ್ಯಪ್ರವೇಶಿಸಿ ಅಣ್ವಸ್ತ್ರ ಯುದ್ಧ ತಪ್ಪಿಸಿತ್ತು’ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಬಹಿರಂಗಪಡಿಸಿದ್ದಾರೆ.

ಈ ಕುರಿತು ಪಾಂಪಿಯೊ ಅವರು ಬರೆದಿರುವ ಆತ್ಮಚರಿತ್ರೆ ‘ನೆವರ್‌ ಗೀವ್‌ ಆನ್‌ ಇಂಚ್‌’ ಪುಸ್ತಕ ಮಂಗಳವಾರ ಬಿಡುಗಡೆಯಾಗಿದೆ. 2019ರಲ್ಲಿ ಉಭಯ ರಾಷ್ಟ್ರಗಳ ನಡುವೆ ಉಲ್ಬಣಿಸಿದ್ದ ಸಂಘರ್ಷದ ವೇಳೆ ಅಮೆರಿಕ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ಶಮನಗೊಳಿಸಿತು ಎಂದು ಅವರು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

‘ಆ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಅಣ್ವಸ್ತ್ರ ಯುದ್ಧ ನಡೆಸಲು ಯಾವ ಮಟ್ಟದ ಪೈಪೋಟಿಗೆ ಇಳಿದಿದ್ದವು ಎನ್ನುವುದು ಜಗತ್ತಿಗೆ ಸರಿಯಾಗಿ ತಿಳಿದಿರಲಿಲ್ಲ’ ಎಂಬ ಸಂಗತಿಯನ್ನು ಭವಿಷ್ಯದಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಎನ್ನಲಾಗುತ್ತಿರುವ ಪಾಂಪಿಯೊ ಬಹಿರಂಗಪಡಿಸಿದ್ದಾರೆ. ಇವರು ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಸಿಐಎ ಮುಖ್ಯಸ್ಥರಾಗಿದ್ದರು.

ADVERTISEMENT

‘ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರ ನಡುವಿನ ಮಾತುಕತೆಯ ಸಭೆಯಲ್ಲಿ ಭಾಗವಹಿಸಲು ಹನಾಯ್‌ ಪ್ರವಾಸದಲ್ಲಿದ್ದೆ. ಆಗ ತಮಗೆ ಭಾರತೀಯ ಹಿರಿಯ ಅಧಿಕಾರಿಯಿಂದ ತುರ್ತು ಕರೆ ಬಂದಿತ್ತು. ಪಾಕಿಸ್ತಾನ ಅಣ್ವಸ್ತ್ರ ದಾಳಿಗೆ ಸಿದ್ಧತೆ ಆರಂಭಿಸಿರುವುದನ್ನು ಅವರು ನನಗೆ ತಿಳಿಸಿದರು. ಸಂಘರ್ಷ ಉಲ್ಬಣಕ್ಕೆ ಅವರೂ ತಯಾರಾಗಿದ್ದರು. ಆಗ ನಾನು ಅವರಿಗೆ ನೀವು ಏನೂ ಮಾಡಬೇಡಿ, ನನಗೆ ಒಂದು ನಿಮಿಷ ಸಮಯಕೊಡಿ, ಇದನ್ನು ಬಗೆಹರಿಸುವೆ ಎಂದೆ. ಅಣ್ವಸ್ತ್ರ ಯುದ್ಧಕ್ಕೆ ಇಳಿಯುದಂತೆ ಉಭಯ ರಾಷ್ಟ್ರಗಳಿಗೆ ಅಮೆರಿಕದ ರಾಜತಾಂತ್ರಿಕರು ಮನವರಿಕೆ ಮಾಡಿಸಿದರು’ ಎಂದು ಪಾಪಿಯೊ ಈ ಪುಸ್ತಕದಲ್ಲಿ ಉಲ್ಲೆಖಿಸಿದ್ದಾರೆ.

ಪಾಂಪಿಯೊ ಅವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರೊಂದಿಗೆ ಪೊಂಗ್ಯಾಂಗ್‌ನಲ್ಲಿ ನಡೆಸಿದ ದಕ್ಷಿಣ ಕೊರಿಯಾ, ಚೀನಾ ಕುರಿತ ರಹಸ್ಯ ಮಾತುಕತೆಗಳ ವಿವರವನ್ನು ಈ ಪುಸ್ತಕದಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಪಾಕಿಸ್ತಾನದ ಉಗ್ರರು ‌ಕಾಶ್ಮೀರಕ್ಕೆ ನುಸುಳಿ ಬಂದು ಆತ್ಮಾಹುತಿ ಬಾಂಬ್‌ ಸ್ಫೋಟಿಸಿ ಭಾರತೀಯ ಅರೆಸೇನಾ ಪಡೆಯ 41 ಸೈನಿಕರನ್ನು ಹತ್ಯೆ ಮಾಡಿದ್ದರು. 2019ರ ಫೆಬ್ರುವರಿಯಲ್ಲಿ ಪಾಕಿಸ್ತಾನದ ಭೂಪ್ರದೇಶದೊಳಗಿದ್ದ ಉಗ್ರರ ಅಡಗುದಾಣ ಬಾಲಾಕೋಟ್‌ ಮೇಲೆ ಭಾರತೀಯ ಸೇನೆ ವೈಮಾನಿಕ ದಾಳಿ (ಸರ್ಜಿಕಲ್‌ ಸ್ಟ್ರೈಕ್‌) ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಆಗ ಭಾರತದ ವಾಯು‍ಪಡೆಯ ಮಿಗ್‌ ವಿಮಾನವನ್ನು ಪಾಕ್‌ ಸೇನೆ ಹೊಡೆದುರುಳಿಸಿ ಪೈಲಟ್‌ ಅಭಿನಂದನ್‌ ಅವರನ್ನು ಸೆರೆ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.