ಪೋಪ್ ಫ್ರಾನ್ಸಿಸ್
ಸಂಗ್ರಹ ಚಿತ್ರ
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು, ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಅವರ ಆರೋಗ್ಯದಲ್ಲಿ ತುಸು ಏರುಪೇರು ಕಂಡುಬಂದಿತ್ತು. ಆದರೆ, ಅವರ ಆರೋಗ್ಯ ಕುರಿತು ಇತ್ತೀಚೆಗೆ ಬಿಡುಗಡೆಯಾಗಿರುವ ಮಾಹಿತಿಯು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸೂಚನೆ ನೀಡಿದೆ.
ಈ ನಡುವೆ, ಪೋಪ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಅವರ ಜೀವನಚರಿತ್ರೆಕಾರರು ಮಾತ್ರ, ಪೋಪ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎನ್ನುತ್ತಿದ್ದಾರೆ.
ರೋಮ್‌ನ ಜೆಮಿಲಿ ಆಸ್ಪತ್ರೆಗೆ ಫೆಬ್ರುವರಿ 14ರಂದು ಪೋಪ್ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕೆಲ ದಿನಪತ್ರಿಕೆಗಳಂತೂ, ಪೋಪ್ ಅವರ ಅಂತ್ಯಸಂಸ್ಕಾರದ ವೇಳೆ ಏನು ನಿರೀಕ್ಷಿಸಬಹುದು ಎಂಬ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ.
‘ಪೋಪ್ ಅವರು, ಈ ಹಿಂದಿನ 16ನೇ ಬೆನೆಡಿಕ್ಟ್ ಅವರನ್ನೇ ಅನುಸರಿಸಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯೇ ಹೆಚ್ಚು’ ಎಂದು ಕೆಲ ಹಿರಿಯ ಕಾರ್ಡಿನಲ್ ಹೇಳುತ್ತಿದ್ದಾರೆ.
‘ಪೋಪ್ ಒಬ್ಬ ಹೋರಾಟಗಾರ. ಅವರು ಚೇತರಿಸಿಕೊಳ್ಳುತ್ತಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಯಾವುದೇ ಯೋಜನೆಯನ್ನು ಅವರು ಹೊಂದಿಲ್ಲ’ ಎಂದು ಪೋಪ್ ಅವರ ಚೀವನಚರಿತ್ರೆ ರಚಿಸಿರುವ ಲೇಖಕಿ ಹಾಗೂ ಅವರ ಸ್ನೇಹಿತೆ ಎಲಿಸಾಬೆಟ್ಟಾ ಪಿಕ್ ಹೇಳುತ್ತಾರೆ.
‘ಆಸ್ಪತ್ರೆಯಿಂದಲೇ ಕರ್ತವ್ಯ’: ದಣಿವರಿಯದ ಕೆಲಸ ಮಾಡುವುದಕ್ಕೆ ಹೆಸರಾಗಿರುವ ಪೋಪ್, ಆಸ್ಪತ್ರೆಯಿಂದಲೇ ವ್ಯಾಟಿಕನ್‌ನ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
‘ಆಸ್ಪತ್ರೆಯಿಂದಲೇ ಚರ್ಚ್‌ನ ದೈನಂದಿನ ಕಾರ್ಯನಿರ್ವಹಣೆಗೆ ಪೋಪ್ ಸಲಹೆ–ಸೂಚನೆ ನೀಡುತ್ತಿದ್ದಾರೆ. ಈ ಮೂಲಕ, ಚರ್ಚ್ ಅನ್ನು ನಾನೇ ಮುನ್ನಡೆಸಿಕೊಂಡು ಹೋಗುವೆ ಎಂಬ ಸಂದೇಶ ರವಾನಿಸುತ್ತಿದ್ದಾರೆ’ ಎಂದು ಪೋಪ್ ಅವರ ಎರಡು ಜೀವನಚರಿತ್ರೆ ರಚಿಸಿರುವ ಐವರಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.