ADVERTISEMENT

Pope Francis | ‘ಜನರ ಪೋಪ್’ಗೆ ವಿದಾಯ: ಅಂತ್ಯ ಸಂಸ್ಕಾರದಲ್ಲಿ 4 ಲಕ್ಷ ಮಂದಿ ಭಾಗಿ

ಏಜೆನ್ಸೀಸ್
Published 26 ಏಪ್ರಿಲ್ 2025, 13:24 IST
Last Updated 26 ಏಪ್ರಿಲ್ 2025, 13:24 IST
<div class="paragraphs"><p>ಪೋಪ್‌ ಫ್ರಾನ್ಸಿಸ್‌ ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ್ದ ಜನ ಸಾಗರ </p></div>

ಪೋಪ್‌ ಫ್ರಾನ್ಸಿಸ್‌ ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ್ದ ಜನ ಸಾಗರ

   

ವ್ಯಾಟಿಕನ್‌ ಸಿಟಿ: ಕಡು ಸಂಪ್ರದಾಯಸ್ಥರ ತೀವ್ರ ವಿರೋಧ, ಟೀಕೆಗಳ ಮಧ್ಯೆಯೂ ಹಲವು ಸುಧಾರಣಾವಾದಿ ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಂಡಿದ್ದ, ‘ಜನರ ಪೋಪ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರಿಗೆ ಇಲ್ಲಿನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಶನಿವಾರ ಅಂತಿಮ ವಿದಾಯ ಹೇಳಲಾಯಿತು.

ಪೋಪ್‌ ಅವರ ಅಂತ್ಯ ಸಂಸ್ಕಾರದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜಗತ್ತಿನ ವಿವಿಧ ಭಾಗಗಳ ಸುಮಾರು 4 ಲಕ್ಷ ಜನರು ಸೇರಿದ್ದರು. ಇವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ADVERTISEMENT

ಅಂತಿಮ ವಿಧಿ ವಿಧಾನಗಳನ್ನು ಹತ್ತಿರದಿಂದ ನೋಡಬೇಕು ಎಂದು ಬಯಸಿ ವಿವಿಧ ದೇಶಗಳಿಂದ ಪುಟ್ಟ ಮಕ್ಕಳೊಂದಿಗೆ ಬಂದಿದ್ದ ಕುಟುಂಬಗಳು ಶುಕ್ರವಾರ ರಾತ್ರಿಯಿಂದಲೇ ಸ್ಕ್ವೇರ್‌ನಲ್ಲಿ ಸೇರಿದ್ದವು. ಸಾರ್ವಜನಿಕರಿಗಾಗಿ ಸಿದ್ಧಪಡಿಸಿದ್ದ ಆಸನಗಳಲ್ಲಿ ಕೆಲವರು ಕುಳಿತುಕೊಂಡಿದ್ದರೆ, ಕೆಲವರು ಅಲ್ಲೇ ಮಲಗಿದ್ದರು. ಮತ್ತೆ ಕೆಲವರು ಕಾರುಗಳಲ್ಲೇ ರಾತ್ರಿ ಕಳೆದು ಬೆಳಗಿನ ಜಾವ ಸೇಂಟ್ ಪೀಟರ್ಸ್‌ ಸ್ಕ್ವೇರ್‌ಗೆ ಬಂದರು.

‘ಅಂತಿಮ ವಿದಾಯ ಬಳಿಕ ಪೋಪ್‌ ಅವರ ಇಚ್ಛೆಯಂತೆಯೇ ಅವರ ಮೃತದೇಹವನ್ನು ರೋಮ್‌ನ ಸೇಂಟ್‌ ಮೇರಿ ಚರ್ಚ್‌ಗೆ ಕೊಂಡೊಯ್ಯಲಾಯಿತು. ಅಲ್ಲಿಯೇ ಅವರನ್ನು ಮಣ್ಣು ಮಾಡಲಾಯಿತು’ ಎಂದು ‘ಕ್ಯಾಥೊಲಿಕ್‌ ನ್ಯೂಸ್‌ ಸರ್ವೀಸ್‌ ರೋಮ್‌’ ಎಂಬ ಚರ್ಚ್‌ನ ‘ಎಕ್ಸ್‌’ ಖಾತೆಯು ಪೋಸ್ಟ್ ಹಂಚಿಕೊಂಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶ್ವನಾಯಕರು ಸೇರಿದ್ದರಿಂದ ವ್ಯಾಟಿಕನ್ ಸಿಟಿಯ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಸುಮಾರು 2,500 ಪೊಲೀಸರು, 1,500 ಸೈನಿಕರು ಭದ್ರತೆಗೆ ನಿಯೋಜನೆಗೊಂಡಿದ್ದರು.

ಉಕ್ರೇನ್‌ ಪ್ರಧಾನಿ ವೊಲೊಡಿಮಿರ್ ಝೆಲೆನ್‌ಸ್ಕಿ ದಂಪತಿ ಜೊತೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು

ವಿಶ್ವ ನಾಯಕರು ಭಾಗಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬ್ರಿಟನ್‌ನ ರಾಜಕುಮಾರ ವಿಲಿಯಮ್ಸ್‌ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಸುಮಾರು 50 ದೇಶಗಳ ನಾಯಕರು ಪೋಪ್‌ ಫ್ರಾನ್ಸಿಸ್‌ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು. ವ್ಯಾಟಿಕನ್ ಸಿಟಿಯೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳದ ಕಾರಣ ಚೀನಾ ತನ್ನ ಪ್ರತಿನಿಧಿಯನ್ನು ಕಳುಹಿಸಿರಲಿಲ್ಲ. ಗಾಜಾ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್‌ ಕುರಿತು ಪೋಪ್‌ ಫ್ರಾನ್ಸಿಸ್‌ ಅವರು ತೀವ್ರ ಟೀಕೆ ಮಾಡಿದ್ದರಿಂದ ಇಸ್ರೇಲ್‌ ತನ್ನ ಅತ್ಯುನ್ನತ ಚರ್ಚ್‌ನ ಪ್ರತಿನಿಧಿಯೊಬ್ಬರನ್ನು ಮಾತ್ರ ಕಳುಹಿಸಿಕೊಟ್ಟಿದೆ.

‘ಸೇತುವೆ ನಿರ್ಮಿಸಿ ಗೋಡೆಯಲ್ಲ’

‘ಜನರ ಮಧ್ಯೆ ಸೇತುವೆ ನಿರ್ಮಿಸದೆ ಗೋಡೆಗಳನ್ನು ಕಟ್ಟುವವನು ಎಲ್ಲೇ ಇದ್ದರೂ ಯಾರೇ ಆಗಿದ್ದರೂ ಆತ ‘ಕ್ರಿಶ್ಚಿಯನ್‌’ ಆಗಲಾರ...’ – ಪೋಪ್‌ ಫ್ರಾನ್ಸಿಸ್‌ ಅವರು 2016ರಲ್ಲಿ ಆಡಿದ ಮಾತಿದು. ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾದಾಗ ಅಮೆರಿಕ–ಮೆಕ್ಸಿಕೊ ಗಡಿಗೆ ಅತ್ಯಂತ ಉದ್ದದ ಗೋಡೆಯನ್ನು ನಿರ್ಮಿಸಿದ್ದರು. ಈ ಬಗ್ಗೆ ಪೋಪ್‌ ಫ್ರಾನ್ಸಿಸ್‌ ಅವರು ಟ್ರಂಪ್‌ ಅವರ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿದ್ದರು. ಪೋಪ್‌ ಅವರ ಅಂತಿಮ ವಿದಾಯದ ಸಮಯದಲ್ಲಿ ಇಟಲಿಯ ಕಾರ್ಡಿನಲ್‌ ಜೊವಾನ್ನಿ ಬತ್ತೀಸ್ತ ರೆ ಅವರು ಟ್ರಂಪ್‌ ಅವರ ಸಮ್ಮುಖದಲ್ಲಿಯೇ ಪೋಪ್‌ ಫ್ರಾನ್ಸಿಸ್‌ ಅವರ ಈ ಹೇಳಿಕೆಯನ್ನು ನೆನಪಿಸಿಕೊಂಡರು. ಟ್ರಂಪ್‌ ಎರಡನೇ ಬಾರಿಗೆ ಅಧ್ಯಕ್ಷರಾದ ಸಂದರ್ಭದಲ್ಲಿ ಅವರು ಕೈಗೊಂಡ ವಲಸೆ ನೀತಿ ಬಗ್ಗೆ ಜಗತ್ತಿನಾದ್ಯಂತ ಟೀಕೆಗಳು ವ್ಯಕ್ತವಾಗಿವೆ. ವಲಸಿಗರ ಬಗ್ಗೆ ಅನುರಾಗಿಗಳಾಗಿರುವಂತೆ ಪೋಪ್‌ ಫ್ರಾನ್ಸಿಸ್‌ ಅವರು ಹೇಳುತ್ತಿದ್ದರು. ಈ ಬಗ್ಗೆಯೂ ಕಾರ್ಡಿನಲ್‌ ರೆ ನೆನ‍ಪಿಸಿಕೊಂಡರು.

ಟ್ರಂಪ್‌– ಝೆಲೆನ್‌ಸ್ಕಿ ಮಾತುಕತೆ

ಒಂದೆಡೆ ಪೋಪ್ ಫ್ರಾನ್ಸಿಸ್‌ ಅವರ ಅಂತಿಮ ವಿದಾಯದ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಸೇಂಟ್‌ ಬೆಸಿಲಿಕಾದಲ್ಲಿ ಮಾತುಕತೆ ನಡೆಸಿದರು. ‘ಮಾತುಕತೆಯು ಫಲಪ್ರದ’ವಾಗಿತ್ತು ಎಂದು ಶ್ವೇತಭವನ ಹೇಳಿದೆ. ‘ಮಾತುಕತೆಯು ಅಲ್ಪ ಕಾಲದ್ದಾಗಿತ್ತು’ ಎಂದು ಝೆಲೆನ್‌ಸ್ಕಿ ಅವರ ವಕ್ತಾರರು ಹೇಳಿದರು. ‘ಅಂತ್ಯಸಂಸ್ಕಾರದ ಬಳಿಕ ಮತ್ತೊಮ್ಮೆ ಮಾತುಕತೆ ನಡೆಯಬಹುದು’ ಎಂದು ಟ್ರಂಪ್‌ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.