ಪ್ರೀತಿ ಜಿಂಟಾ
ಚಿತ್ರಕೃಪೆ: X / @realpreityzinta
ಲಾಸ್ ಏಂಜಲೀಸ್/ನವೆದಹಲಿ: ಲಾಸ್ ಏಂಜಲೀಸ್‌ನಲ್ಲಿ ನೆಲೆಸಿರುವ ನಟಿ ಪ್ರೀತಿ ಜಿಂಟಾ ಅವರು, ಕಾಳ್ಗಿಚ್ಚಿನ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಸುರಕ್ಷಿತವಾಗಿದ್ದೇನೆ. ಆದರೆ, ವಿನಾಶಕಾರಿ ಕಾಳ್ಗಿಚ್ಚನ್ನು ಕಂಡು ಹೃದಯ ಚೂರಾಗಿದೆ ಎಂದಿದ್ದಾರೆ.
ಕಾಳ್ಗಿಚ್ಚಿನಿಂದಾಗಿ ಈವರೆಗೆ 16 ಮಂದಿ ಮೃತಪಟ್ಟಿರುವುದಾಗಿ ಲಾಸ್ ಏಂಜಲೀಸ್ ಕೌಂಟಿ ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಕಳೆದವಾರ ಕಾಣಿಸಿಕೊಂಡ ಕಾಳ್ಗಿಚ್ಚಿನಿಂದಾಗಿ, ಮನೆಗಳು, ವಸತಿ ಸಮುಚ್ಚಯಗಳು, ವಾಣಿಜ್ಯ ಕೇಂದ್ರಗಳು ಸೇರಿದಂತೆ ಈವರೆಗೆ 12,000 ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟುಕರಕಲಾಗಿವೆ.
ಪ್ರೀತಿ ಜಿಂಟಾ ಅವರು ಹಣಕಾಸು ವಿಶ್ಲೇಷಕ ಆಗಿರುವ ಪತಿ ಜೆನ್ ಗುಡ್‌ನಫ್ ಹಾಗೂ ಅವಳಿ ಮಕ್ಕಳೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವಾಸವಾಗಿದ್ದಾರೆ. ಕಾಳ್ಗಿಚ್ಚಿನ ಭೀಕರತೆ ಬಗ್ಗೆ ಎಕ್ಸ್/ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ಇಂಥಹ ಭೀಕರ ದಿನಗಳನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.
'ಲಾಸ್ ಎಂಜಲೀಸ್‌ನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಅಗ್ನಿ ಆಹುತಿ ಪಡೆಯುತ್ತದೆ ಎಂದು ಊಹಿಸಿರಲಿಲ್ಲ. ಈ ವಿನಾಶದಿಂದಾಗಿ ಎದೆಗುಂದಿದ್ದೇನೆ. ಬದುಕುಳಿದದ್ದಕ್ಕೆ ದೇವರಿಗೆ ಕೃತಜ್ಞರಾಗಿರುತ್ತೇನೆ. ಎಲ್ಲವನ್ನೂ ಕಳೆದುಕೊಂಡು ಸ್ಥಳಾಂತರಗೊಂಡಿರುವವರಿಗಾಗಿ ಪ್ರಾರ್ಥಿಸುತ್ತೇನೆ. ಬೆಂಕಿಯು ಆದಷ್ಟು ಬೇಗ ಹತೋಟಿಗೆ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇನೆ. ಜೀವಗಳನ್ನು ಹಾಗೂ ಆಸ್ತಿ–ಪಾಸ್ತಿಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ಅಗ್ನಿಶಾಮಕ ಇಲಾಖೆ, ಸಿಬ್ಬಂದಿ ಮತ್ತು ಎಲ್ಲರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಪ್ರೀತಿ ಜಿಂಟಾ ಹಾಗೂ ಸನ್ನಿ ಡಿಯೋಲ್ ನಟನೆಯ 'ಲಾಹೋರ್ 1947' ಸಿನಿಮಾ ಇದೇ ವರ್ಷ ಬಿಡುಗಡೆಯಾಗಲಿದೆ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರಕ್ಕೆ ಆಮೀರ್ ಖಾನ್ ಬಂಡವಾಳ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.