ADVERTISEMENT

ಮನೆ ಬಿಟ್ಟು ಪರಾರಿಯಾದ ಗೊಟಬಯ: 13ರಂದು ಅಧ್ಯಕ್ಷರ ರಾಜೀನಾಮೆ – ಸ್ಪೀಕರ್‌

ಏಜೆನ್ಸೀಸ್
Published 9 ಜುಲೈ 2022, 18:10 IST
Last Updated 9 ಜುಲೈ 2022, 18:10 IST
   

ಕೊಲಂಬೊ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ಅವರ ಗೃಹಕಚೇರಿಗೆ ಪ್ರತಿಭಟನಕಾರರು ಶನಿವಾರ ನುಗ್ಗಿದ್ದಾರೆ. ಜನರ ಆಕ್ರೋಶಕ್ಕೆ ಗುರಿಯಾಗಿರುವ ಗೊಟಬಯ ಮನೆಯಿಂದ ಪಲಾಯನ ಮಾಡಿದ್ದಾರೆ.

‘ಪ್ರತಿಭಟನೆ ನಿಯಂತ್ರಿಸುವುದು ಕಷ್ಟವಾಗಲಿದೆ’ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಹೀಗಾಗಿ, ಗೊಟಬಯ ಶುಕ್ರವಾರವೇ ಮನೆಯಿಂದ ಪಲಾಯನ ಮಾಡಿದ್ದಾರೆ’ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಮಾಧ್ಯಮದವರ ಜೊತೆ ಮಾತನಾಡಿರುವ ಸ್ಪೀಕರ್‌ ಮಹಿಂದಾ ಯಪಾ ಅಬೆವರ್ಧನ, ‘ಇದೇ 13ರಂದು ಗೊಟಬಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಶನಿವಾರ ಸಂಜೆ ನಡೆದ ಸರ್ವಪಕ್ಷಗಳ ಸಭೆಯಲ್ಲಿಗೊಟಬಯ ರಾಜೀನಾಮೆ ಕುರಿತು ತೀವ್ರ ಒತ್ತಾಯ ಕೇಳಿಬಂದಿತ್ತು. ಸ್ಪೀಕರ್‌ ಮಹಿಂದಾ ಅವರು ಈ ವಿಚಾರವನ್ನು ಪತ್ರದ ಮೂಲಕ ಗೊಟಬಯ ಗಮನಕ್ಕೆ ತಂದಿದ್ದರು. ಹೀಗಾಗಿ ಇದೇ 13ರಂದು ಹುದ್ದೆ ತ್ಯಜಿಸುವುದಾಗಿ ಅವರು ಸ್ಪೀಕರ್‌ಗೆ ತಿಳಿಸಿದ್ದಾರೆ. ಹೊಸ ಅಧ್ಯಕ್ಷರ ಆಯ್ಕೆಯವರೆಗೂ ಮಹಿಂದಾ ಅವರು ಹಂಗಾಮಿಯಾಗಿ ಈ ಹುದ್ದೆ ನಿಭಾಯಿಸಲಿದ್ದಾರೆ.

ತೀವ್ರಗೊಂಡ ಪ್ರತಿಭಟನೆ:ದೇಶದ ವಿವಿಧ ಭಾಗಗಳಿಂದ ಕೊಲಂಬೊದತ್ತ ಧಾವಿಸುತ್ತಿರುವ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ಕೊಲಂಬೊದ ಹೃದಯಭಾಗದ ಫೋರ್ಟ್‌ ಪ್ರದೇಶದಲ್ಲಿರುವ ಗೊಟಬಯ ಅವರ ನಿವಾಸಕ್ಕೆ ಭಾರಿ ಭದ್ರತೆ ಒದಗಿಸಲಾಗಿತ್ತು. ಆದರೆ, ಸಾಗರೋಪಾದಿಯಲ್ಲಿ ಮನೆಯತ್ತ ಬಂದ ಪ್ರತಿಭಟನಕಾರರು, ತಡೆಗೋಡೆಗಳನ್ನು ಕೆಡವಿ, ಕಾಂಪೌಂಡ್‌ ಹಾರಿ ಅಧ್ಯಕ್ಷರ ನಿವಾಸದೊಳಗೆ ನುಗ್ಗಿದ್ದರು.

ಪ್ರತಿಭಟನಕಾರರು ಅಧ್ಯಕ್ಷರ ನಿವಾಸವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರೂ, ಯಾವುದೇ ಹಾನಿ ಮಾಡಿಲ್ಲ ಹಾಗೂ ಹಿಂಸಾಚಾರದಲ್ಲಿ ತೊಡಗಿಲ್ಲ ಎಂದು ಮೂಲಗಳು ಹೇಳಿವೆ. ಅಧ್ಯಕ್ಷರ ಐಷಾರಾಮಿ ನಿವಾಸದಲ್ಲಿನ ಈಜುಕೊಳದಲ್ಲಿ ಪ್ರತಿಭಟನಕಾರರು ಈಜುತ್ತಿದ್ದ, ಮೋಜಿನಲ್ಲಿ ತೊಡಗಿದ್ದ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸುವ ಜೊತೆಗೆ ಜಲಫಿರಂಗಿಗಳನ್ನು ಬಳಸಿದ್ದಾರೆ. ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಿಂದಾಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ಅವರನ್ನು ನಗರದ ನ್ಯಾಷನಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶದ ವಿವಿಧ ನಗರಗಳಿಂದಲೂ ಪ್ರತಿಭಟನಕಾರರು ರೈಲುಗಳ ಮೂಲಕ ಕೊಲಂಬೊಕ್ಕೆ ಬಂದಿದ್ದಾರೆ. ಕೊಲಂಬೊಕ್ಕೆ ರೈಲುಗಳನ್ನು ಓಡಿಸುವಂತೆ ಗಾಲೆ, ಕ್ಯಾಂಡಿ, ಮಟಾರಗಳಲ್ಲಿನ ರೈಲು ನಿಲ್ದಾಣದ ಅಧಿಕಾರಿಗಳೊಂದಿಗೆ ಜನರು ಮಾತಿನ ಚಕಮಕಿಯನ್ನೂ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.