ADVERTISEMENT

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ: ಅಧ್ಯಕ್ಷ ಪರಾರಿ

ಅಧ್ಯಕ್ಷ ಗೊಟಬಯ ಮಾಲ್ಡೀವ್ಸ್‌ಗೆ ಪರಾರಿ * ತೀವ್ರ ಪ್ರತಿಭಟನೆ

ಪಿಟಿಐ
Published 13 ಜುಲೈ 2022, 19:30 IST
Last Updated 13 ಜುಲೈ 2022, 19:30 IST
ಪ್ರತಿಭಟನೆ
ಪ್ರತಿಭಟನೆ   

ಕೊಲಂಬೊ:ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಂಗಳವಾರ ತಡರಾತ್ರಿ ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ. ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಬುಧವಾರ ಈ ಸುದ್ದಿ ಬಹಿರಂಗವಾಗು ತ್ತಿದ್ದಂತೆ, ದೇಶದಾದ್ಯಂತ ತೀವ್ರ ಪ್ರತಿ ಭಟನೆ ನಡೆದಿದೆ. ಪ್ರತಿ ಭಟನೆಯನ್ನು ನಿಯಂತ್ರಿಸಲು, ಪ್ರಧಾನಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ದೇಶದೆಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿರುವ ಕಾರಣ, ಹಲವೆಡೆ ಕರ್ಫ್ಯೂ ಹೇರಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಹೊಣೆಯನ್ನು ಸೇನೆಗೆ ನೀಡಲಾಗಿದೆ. ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ತರಲು ಏನು ಅಗತ್ಯ ವಿದೆಯೋ, ಅದೆಲ್ಲವನ್ನೂ ಮಾಡಿ’ ಎಂದು ಪ್ರಭಾರಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಸೇನೆ ಮತ್ತು ಪೊಲೀಸರಿಗೆ ಆದೇಶಿಸಿದ್ದಾರೆ. ‘ಈ ಕಾರ್ಯಾಚರಣೆ ವೇಳೆ ಯಾವುದೇ ರಾಜಕೀಯ ಹಸ್ತಕ್ಷೇಪ ಇರುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.

‘ಅಧ್ಯಕ್ಷ ಗೊಟಬಯ ಮತ್ತು ಪ್ರಧಾನಿ ರಾನಿಲ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.ಕೊಲಂಬೊದಲ್ಲಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಗೊಟಬಯ ಅವರು ಪರಾರಿಯಾಗಲು ವಾಯುಪಡೆ ನೆರವು ನೀಡಿದೆ ಎಂದು ಆರೋಪಿಸಿ, ವಾಯುಪಡೆಯ ಕಮಾಂ ಡರ್ ಅವರ ನಿವಾಸಕ್ಕೂ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ಸೇನೆ ಮತ್ತು ಪೊಲೀಸರು ಪ್ರತಿಭಟನಕಾರರ ಮೇಲೆ ಆಶ್ರುವಾಯು ಷೆಲ್‌ ಸಿಡಿಸಿ, ಜಲಫಿರಂಗಿ ಪ್ರಯೋಗಿಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ADVERTISEMENT

ದೇಶದ ಸರ್ಕಾರಿ ಸುದ್ದಿವಾಹಿನಿ ‘ರೂಪವಾಹಿನಿ’ ಕೇಂದ್ರಕ್ಕೂ ಪ್ರತಿಭಟನಕಾರರು ಮುತ್ತಿಗೆ ಹಾಕಿದರು. ಹೀಗಾಗಿ ವಾಹಿನಿಯು ಕೆಲಕಾಲ ಪ್ರಸಾರವನ್ನು ಸ್ಥಗಿತಗೊಳಿಸಿತ್ತು.

ಶಸ್ತ್ರಾಸ್ತ್ರ ಕೆಳಗಿಳಿಸಿದ ಸೈನಿಕರು:‘ತುರ್ತು ಪರಿಸ್ಥಿತಿ ಮತ್ತು ಕರ್ಫ್ಯೂ ಜಾರಿ ಮಾಡಲು ಏನು ಬೇಕಾದರೂ ಮಾಡಿ’ ಎಂದು ಪ್ರಧಾನಿ ರಾನಿಲ್ ಅವರು ಸೇನೆ ಮತ್ತು ಪೊಲೀಸರಿಗೆ ಸೂಚಿ ಸಿದ್ದರು. ಆದರೆ,ಕೊಲಂಬೊದಲ್ಲಿ ನಿಯೋಜಿಸಿದ್ದ ಸೈನಿಕರು ಬುಧವಾರ ರಾತ್ರಿ ವೇಳೆಗೆ ಶಸ್ತ್ರಾಸ್ತ್ರ ಕೆಳಗಿಳಿಸಿದ್ದಾರೆ. ಕೊಲಂಬೊದಲ್ಲಿರುವ ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಪ್ರತಿಭಟನಕಾರರಿಗೆ ಒಡ್ಡಿದ್ದ ತಡೆಯನ್ನು, ರಾತ್ರಿ ವೇಳೆಗೆ ಸಡಿಲಗೊಳಿಸಿದ್ದಾರೆ. ಹೀಗಾಗಿ ಪ್ರತಿಭಟನಕಾರರು ಒಳನುಗ್ಗಿ, ಪ್ರಧಾನಿ ಕಚೇರಿ ವಶಕ್ಕೆ ಪಡೆದಿದ್ದಾರೆ.

‘ದೇಶದಲ್ಲಿ ಸಾಮಾನ್ಯ ಸ್ಥಿತಿ ಮರಳು ವವರೆಗೂ ಜನರು ಶಾಂತಿಯಿಂದ ವರ್ತಿಸಬೇಕು’ ಎಂದು ಶ್ರೀಲಂಕಾದ ಮೂರೂ ಸೇನಾಪಡೆಗಳ ಮುಖ್ಯಸ್ಥರು ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.