ಮಮತಾ ಬ್ಯಾನರ್ಜಿ
ಪಿಟಿಐ ಚಿತ್ರ
ಲಂಡನ್: ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಭಾಷಣ ಮಾಡುವಾಗ, ಚುನಾವಣಾ ಹಿಂಸಾಚಾರ ಮತ್ತು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿನ ಅತ್ಯಾಚಾರ ಪ್ರಕರಣ ವಿರೋಧಿ ಭಿತ್ತಿಪತ್ರ ಪ್ರದರ್ಶಿಸಿ ಗುಂಪೊಂದು ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಬ್ರಿಟನ್‌ನಲ್ಲಿರುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಪ್ರತಿಭಟನೆಯ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿನ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ.
ಆಕ್ಸ್‌ಫರ್ಡ್ ವಿವಿಯ ಕೆಲಾಗ್ ಕಾಲೇಜಿನಲ್ಲಿ ಮಮತಾ ಬ್ಯಾನರ್ಜಿ ಅವರು ‘ಸಾಮಾಜಿಕ ಬೆಳವಣಿಗೆ– ಪಶ್ಚಿಮ ಬಂಗಾಳದಲ್ಲಿ ಬಾಲಕಿಯರು ಮತ್ತು ಮಹಿಳಾ ಸಬಲೀಕರಣ’ ವಿಷಯದ ಕುರಿತು ಮಾತನಾಡುತ್ತಿದ್ದಾಗ ಸಭಿಕರೊಬ್ಬರು, ಸಿಂಗೂರ್‌ನಿಂದ ಟಾಟಾ ನ್ಯಾನೊ ಘಟಕ ಸ್ಥಳಾಂತರಿಸಿದ್ದನ್ನು ನೆನಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಮತಾ, ‘ಟಾಟಾ ಕಂಪನಿಯು ವಾಪಸ್ ಬಂದು ಖಡಗ್‌ಪುರ್ ಮತ್ತು ರಾಜಾರ್‌ಹಾಟ್‌ನಲ್ಲಿ ಕೈಗಾರಿಕೆ ಸ್ಥಾಪಿಸಿದೆ. ಆರ್.ಜಿ.ಕರ್ ಪ್ರಕರಣ ನ್ಯಾಯಾಂಗದ ವ್ಯಾಪ್ತಿಯಲ್ಲಿದೆ. ಕೇಂದ್ರ ಸರ್ಕಾರದ ಸಂಸ್ಥೆಯೇ ತನಿಖೆ ನಡೆಸುತ್ತಿದೆ’ ಎಂದರು.
ಚುನಾವಣಾ ಹಿಂಸಾಚಾರ ಕುರಿತ ಪ್ರಶ್ನೆಗೆ, ‘ಈ ವೇದಿಕೆಯಲ್ಲಿ ರಾಜಕಾರಣ ಮಾಡಬೇಡಿ, ನೀವು ರಾಜ್ಯಕ್ಕೆ ಬಂದು ನಿಮ್ಮ ಪಕ್ಷವನ್ನು (ಸಿಪಿಎಂ) ಕಟುವಾಗಿ ಪ್ರಶ್ನಿಸಿ’ ಎಂದ ಮಮತಾ, ತಾವು ಗಾಯಗೊಂಡಿದ್ದ ಫೋಟೊವೊಂದನ್ನು ತೋರಿಸಿ ‘ನನ್ನ ಕೊಲೆಗೆ ಯತ್ನ ನಡೆದಿತ್ತು’ ಎಂದರು. ಸಭಿಕರ ಸಾಲಿನಲ್ಲಿ ಹಿಂದೆ ಕುಳಿತಿದ್ದ ಕೆಲವರು ತಕ್ಷಣ ಎದ್ದು ನಿಂತು, ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಈ ಗದ್ದಲದ ನಡುವೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಮಮತಾ, ಸಭಿಕರ ಪ್ರಶ್ನೆಗಳಿಗೂ ಉತ್ತರಿಸಿದರು.
ಭಾರತವು ಬ್ರಿಟನ್ ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ. ಆದರೂ ಮಮತಾ ಬ್ಯಾನರ್ಜಿ ವಿದೇಶಿ ನೆಲದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತಿದ್ದಾರೆಸುಕಾಂತ ಮಜುಂದಾರ್, ಕೇಂದ್ರ ಸಚಿವ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವುದು ಮಮತಾ ಬ್ಯಾನರ್ಜಿಗೆ ಇಷ್ಟವಿಲ್ಲ. ಇದು ನಿಜಕ್ಕೂ ನಾಚಿಕೆಗೇಡು. ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ಇದು ನಾಚಿಕೆಗೇಡು. ವಿದೇಶಿ ನೆಲದಲ್ಲಿ ಯಾರು ಈ ರೀತಿ ವರ್ತಿಸುತ್ತಾರೆ?ಅಮಿತ್ ಮಾಳವಿಯಾ, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ
ಎಸ್ಎಫ್ಐ ಅವರನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಬಂಗಾಳದಲ್ಲಿ ಡ್ರಾಪ್-ಔಟ್ ವಿದ್ಯಾರ್ಥಿಗಳ ಸಂಖ್ಯೆ ಏಕೆ ಹೆಚ್ಚುತ್ತಿದೆ ಮತ್ತು ಅವರ ಶಿಕ್ಷಣ ಅಭಿವ್ಯಕ್ತಿ ಮತ್ತು ಭದ್ರತೆಯ ಹಕ್ಕುಗಳು ದಿನದಿಂದ ದಿನಕ್ಕೆ ಕುಗ್ಗುತ್ತಿರುವುದೇಕೆ ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕಾಗುತ್ತದೆದೇಬಂಜನ್ ದಾಸ್, ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕ
ಮಮತಾ ಭಾಷಣಕ್ಕೆ ಬಿಜೆಪಿ, ಸಿಪಿಎಂ ಕಿಡಿ
ಮಮತಾ ಅವರ ಭಾಷಣಕ್ಕೆ ಎಡಪಂಥೀಯ ಯುವಕರ ಗುಂಪು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದು ಮತ್ತು ಮಮತಾ ಅವರು ದೇಶದ ಆರ್ಥಿಕತೆಯ ಬಗ್ಗೆ ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಈಗ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಈ ರೀತಿಯ ಅಡ್ಡಿಗಳು ಇಡೀ ದೇಶಕ್ಕೆ ಕಳಂಕವಾಗಿವೆ ಎಂದು ತೃಣಮೂಲ ಕಾಂಗ್ರೆಸ್ ಪ್ರತಿಪಾದಿಸಿದರೆ ಸಿಪಿಎಂನ ವಿದ್ಯಾರ್ಥಿ ವಿಭಾಗ ಎಸ್ಎಫ್ಐ ‘ಮುಖ್ಯಮಂತ್ರಿ ಅವರು ಎಲ್ಲಿಗೆ ಹೋದರೂ ಆಕ್ರೋಶಿತ ವಿದ್ಯಾರ್ಥಿ ಸಮುದಾಯದ ಕಠಿಣ ಪ್ರಶ್ನೆಗಳಿಂದ ಪಾರಾಗಲು ಸಾಧ್ಯವಿಲ್ಲ’ ಎಂದು ಹೇಳಿದೆ. 2060ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬ ಅಂದಾಜನ್ನು ಒಪ್ಪದ ಮಮತಾ ‘ನಾನು ಇಲ್ಲಿ ಮಾತನಾಡಬಾರದ ಆಂತರಿಕ ಮತ್ತು ಬಾಹ್ಯ ವ್ಯವಹಾರಗಳ ಅನೇಕ ವಿಷಯಗಳಿವೆ. ನಾನು ಅವುಗಳನ್ನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೋವಿಡ್-19 ರ ನಂತರ ಮತ್ತು ಜಗತ್ತಿನಲ್ಲಿ ಸದ್ಯದ ಪ್ರಕ್ಷುಬ್ಧತೆಯೊಂದಿಗೆ ಪ್ರತಿ ದೇಶವೂ ತೊಂದರೆ ಎದುರಿಸುತ್ತಿವೆ. ಜಗತ್ತಿನಾದ್ಯಂತ ಆರ್ಥಿಕ ಸಮರದ ಸ್ಥಿತಿ ನಡೆಯುತ್ತಿದ್ದರೆ ನಾವು ಹೇಗೆ ಲಾಭ ಪಡೆಯಬಹುದು?’ ಎಂದು ಹೇಳಿದರು. ಈ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ ನಾಯಕರು ಮಮತಾ ಅವರು ವಿದೇಶಿ ನೆಲದಲ್ಲಿ ಭಾರತದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.