ADVERTISEMENT

ಪಂಜ್‌ಶಿರ್ ಮೇಲೆ ಬಾಂಬ್ ದಾಳಿ ವಿರೋಧಿಸಿ ಕಾಬೂಲ್‌ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ

ಐಎಎನ್ಎಸ್
Published 7 ಸೆಪ್ಟೆಂಬರ್ 2021, 10:24 IST
Last Updated 7 ಸೆಪ್ಟೆಂಬರ್ 2021, 10:24 IST
ಕಾಬೂಲ್‌ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ (ರಾಯಿಟರ್ಸ್ ಚಿತ್ರ)
ಕಾಬೂಲ್‌ನಲ್ಲಿ ಪಾಕ್ ವಿರುದ್ಧ ಪ್ರತಿಭಟನೆ (ರಾಯಿಟರ್ಸ್ ಚಿತ್ರ)   

ಕಾಬೂಲ್: ಅಫ್ಗಾನಿಸ್ತಾನದ ಪಂಜ್‌ಶಿರ್‌ನಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿ ಕಾಬೂಲ್‌ನಲ್ಲಿ ನೂರಾರು ಯುವಕ ಯುವತಿಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಕಾಬೂಲ್‌ನಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಅಫ್ಗಾನಿಸ್ತಾನದಲ್ಲಿ ಕೈಗೊಂಬೆ ಸರ್ಕಾರ ರಚನೆಯಾಗುವುದು ಬೇಕಾಗಿಲ್ಲ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಫ್ಗಾನಿಸ್ತಾನದ ಜನರು ತಾಲಿಬಾನ್ ವಿರುದ್ಧ ಒಗ್ಗೂಡಬೇಕು ಎಂದು ಪಂಜ್‌ಶಿರ್‌ನಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ಸಹ ನಾಯಕ ಅಹ್ಮದ್ ಮಸೂದ್ ಕರೆ ನೀಡಿದ ಬೆನ್ನಲ್ಲೇ ಕಾಬೂಲ್‌ನಲ್ಲಿ ಜನರು ಜಮಾಯಿಸಿದ್ದಾರೆ ಎಂದು ‘ಖಾಮಾ ನ್ಯೂಸ್’ ವರದಿ ಮಾಡಿದೆ.

‘ಪಾಕಿಸ್ತಾನಕ್ಕೆ ಸಾವಾಗಲಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅಫ್ಗಾನಿಸ್ತಾನದಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನಾ ನಿರತರು ‘ಸ್ವಾತಂತ್ರ್ಯ’, ‘ಅಲ್ಲಾಹ್ ಅಕ್ಬರ್’, ‘ನಾವು ಬಂಧನ ಬಯಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.