ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ನ್ಯಾಷನಲ್ ಗಾರ್ಡ್ಸ್‌ನ ಸಿಬ್ಬಂದಿಯನ್ನು ನಿಯೋಜಿಸಿದ ಬೆನ್ನಲ್ಲೇ, ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಟ್ರಂಪ್ ಕ್ರಮ ವಿರೋಧಿಸಿ ಸಾವಿರಾರು ಪ್ರತಿಭಟನಕಾರರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ವಲಸೆ ಅಧಿಕಾರಿಗಳು ಕೈಗೊಂಡಿರುವ ಶೋಧ ಕಾರ್ಯಾಚರಣೆ ವಿರೋಧಿಸಿ ಲಾಸ್ ಏಂಜಲೀಸ್‌ನಲ್ಲಿ ಸತತ ಮೂರನೇ ದಿನವೂ ಪ್ರತಿಭಟನೆ ನಡೆಯಿತು. ನ್ಯಾಷನಲ್ ಗಾರ್ಡ್ಸ್‌ನ ಸಿಬ್ಬಂದಿಯನ್ನು ಕಂಡ ಪ್ರತಿಭಟನಕಾರರು, ‘ವಾಪಸ್ ತೆರಳಿ’, ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿದರು. ಹಲವು ಪ್ರಮುಖ ಹೆದ್ದಾರಿಗಳನ್ನು ತಡೆದರು ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದರು.
ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದರು. ಸಂಜೆಯಾಗುತ್ತಿದ್ದಂತೆಯೇ ಬಹುತೇಕ ಪ್ರತಿಭಟನಕಾರರು ಸ್ಥಳದಿಂದ ಚದುರಿದರು. ಗುಂಪು ಸೇರುವಂತಿಲ್ಲ ಎಂದು ಪೊಲೀಸರು ಘೋಷಿಸಿದರು. ಸ್ಥಳದಿಂದ ಕದಲದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.