ADVERTISEMENT

ಇಮ್ರಾನ್‌ ಮನೆಯಲ್ಲಿ ಭಯೋತ್ಪಾದಕರು: ಕಾರ್ಯಾಚರಣೆಗೆ ಇಳಿದ ಪಂಜಾಬ್ ಪೊಲೀಸರು

ಪಿಟಿಐ
Published 18 ಮೇ 2023, 16:11 IST
Last Updated 18 ಮೇ 2023, 16:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಾಹೋರ್‌: ಲಾಹೋರ್‌ನ ಜಮಾನ್‌ ಪಾರ್ಕ್‌ನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸದಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸರ್ಕಾರಕ್ಕೆ ಒಪ್ಪಿಸುವುದಕ್ಕೆ ನಿಗದಿಪಡಿಸಿದ ಗಡುವು ಕೊನೆಗೊಂಡ ಹಿನ್ನೆಲೆಯಲ್ಲಿ ಪಂಜಾಬ್‌ ಪೊಲೀಸರು ಮನೆಯನ್ನು ಸುತ್ತುವರಿದಿದ್ದು, ಯಾವುದೇ ಸಮಯದಲ್ಲಿ ಕಾರ್ಯಾಚರಣೆ ಕೈಗೊಳ್ಳುವ ನಿರೀಕ್ಷೆ ಇದೆ.

ಮೇ 9ರಂದು ಸೇನಾ ನೆಲೆಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ 8 ಶಂಕಿತರನ್ನು ಜಮಾನ್ ಪಾರ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಜಮಾನ್ ಪಾರ್ಕ್‌ನಲ್ಲಿ ಪೊಲೀಸರು ಶಸ್ತ್ರಸಜ್ಜಿತರಾಗಿ ಸಿದ್ಧವಾಗಿದ್ದಾರೆ. ಇಮ್ರಾನ್‌ ಖಾನ್ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಸ್ಥಳಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹಸನ್ ಭಟ್ಟಿ ಗುರುವಾರ ತಿಳಿಸಿದ್ದಾರೆ.

‘ಪೊಲೀಸರು ಕೆಲ ಬಂಧಿತ ಆರೋಪಿಗಳನ್ನು ಜಮಾನ್ ಪಾರ್ಕ್‌ಗೆ ಕರೆತಂದು ಅವರನ್ನೇ ಬಂಧಿಸಿ, ಕೆಲ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಸಾಭೀತುಪಡಿಸಲು ಹೊರಟಿದ್ದಾರೆ’ ಎಂದು ಇಮ್ರಾನ್ ಪಕ್ಷ ಆರೋಪಿಸಿದೆ.

ADVERTISEMENT

ಖಾನ್‌ ಅವರ ಸೋದರಳಿಯ ಹಸನ್ ನಿಯಾಜಿ ಸೇರಿದಂತೆ ಕನಿಷ್ಠ 30–40 ಭಯೋತ್ಪಾದಕರು ಜಮಾನ್ ಪಾರ್ಕ್‌ನಲ್ಲಿ ಇರಬಹುದು. ಅವರ ಶರಣಾಗತಿಗೆ ನೀಡಿದ ಗಡುವು ಗುರುವಾರ ಕೊನೆಗೊಂಡಿದೆ. ಹಾಗಾಗಿ ಈಗ ಪೊಲೀಸರ ದಾಳಿ ನಡೆಯಲಿದೆ ಎಂದು ಪಂಜಾಬ್‌ನ ಉಸ್ತುವಾರಿ ಮಾಹಿತಿ ಸಚಿವ ಅಮೀರ್ ಮಿರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.