ADVERTISEMENT

ರಷ್ಯಾ ಮೊದಲು ಅಣ್ವಸ್ತ್ರ ಬಳಸಲ್ಲ: ಪುಟಿನ್‌

‘ಉಕ್ರೇನ್‌ ಬಿಕ್ಕಟ್ಟು ದೀರ್ಘಾವಧಿಗೆ ಮುಂದುವರಿಯಲಿದೆ; ಅಣ್ವಸ್ತ್ರ ಸಂಘರ್ಷದ ಆತಂಕ ಹೆಚ್ಚುತ್ತಿದೆ’

ಏಜೆನ್ಸೀಸ್
Published 8 ಡಿಸೆಂಬರ್ 2022, 13:29 IST
Last Updated 8 ಡಿಸೆಂಬರ್ 2022, 13:29 IST
ಪುಟಿನ್‌
ಪುಟಿನ್‌   

ಮಾಸ್ಕೊ: ‘ಉಕ್ರೇನ್‌ ಸಂಘರ್ಷದಲ್ಲಿ ಅಣ್ವಸ್ತ್ರ ಬಳಕೆಯ ಆತಂಕ ಹೆಚ್ಚುತ್ತಿದೆ. ಆದರೆ, ನಾವು ಯಾವುದೇ ಕಾರಣಕ್ಕೂ ಮೊದಲು ಅಣ್ವಸ್ತ್ರ ಬಳಸುವ ಗೋಜಿಗೆ ಹೋಗುವುದಿಲ್ಲ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸ್ಪಷ್ಟಪಡಿಸಿದ್ದಾರೆ.

ಬುಧವಾರದೇಶದ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡಿದ ಪುಟಿನ್‌, ‘ಉಕ್ರೇನ್‌ ಸಂಘರ್ಷವು ಇನ್ನಷ್ಟು ದೀರ್ಘಾವಧಿಗೆ ಮುಂದುವರಿಯಲಿದೆ. ನಮಗೆ ಅಣ್ವಸ್ತ್ರಗಳ ಅರಿವಿದೆ. ಅವುಗಳನ್ನು ಬಳಸಲುನಾವು ಹುಚ್ಚರಲ್ಲ. ಆದರೆ, ಅಣ್ವಸ್ತ್ರದ ಬೆದರಿಕೆ ಹೆಚ್ಚುತ್ತಿರುವುದು ವಾಸ್ತವ. ಅದನ್ನು ಇಲ್ಲಿ ಮುಚ್ಚಿಡುವುದೇನಿಲ್ಲ. ಶತ್ರುವಿನ ದಾಳಿಗೆ ಪ್ರತ್ಯುತ್ತರ ನೀಡಲು ಮಾತ್ರ ಅಣ್ವಸ್ತ್ರ ಬಳಸುತ್ತೇವೆ’ ಎಂದು ಅವರು ಹೇಳಿದರು.

ಉಕ್ರೇನ್‌ ಮೇಲಿನಸೇನಾ ಕಾರ್ಯಾಚರಣೆ ಹತ್ತನೇ ತಿಂಗಳಿಗೆ ಕಾಲಿಟ್ಟಿರುವಾಗ ನಿರ್ದಿಷ್ಟ ಗುರಿ ಸಾಧಿಸಲು ವಿಫಲವಾಗಿರುವ ಕಾರಣಕ್ಕೆ ರಷ್ಯಾ ಅಣ್ವಸ್ತ್ರದ ಮೊರೆ ಹೋಗಬಹುದೆಂಬ ಆತಂಕ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚುತ್ತಿದೆ. ಇಂತಹಸಂದರ್ಭದಲ್ಲಿ ಪುಟಿನ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ನಾವು ಎಂತಹದೇ ಸನ್ನಿವೇಶದಲ್ಲೂ ಮೊದಲು ಅಣ್ವಸ್ತ್ರ ಬಳಸುವುದಿಲ್ಲ. ಆದರೆ, ನಮ್ಮ ಮೇಲೆ ಅಣು ದಾಳಿ ನಡೆದರೆ ಪ್ರತಿ ದಾಳಿಗೆ ನಮ್ಮ ಬಳಿ ಇರುವ ಅಣ್ವಸ್ತ್ರ ಬಳಸುವುದಿಲ್ಲ ಎನ್ನಲಾರೆ. ಸದ್ಯ ಅವುಗಳ ಬಳಕೆ ಸಾಧ್ಯತೆಗಳು ತೀರಾ ಕಡಿಮೆ’ ಎಂದು ಪುಟಿನ್‌ ಹೇಳಿದರು.

ಬೇಜವಾಬ್ದಾರಿತ ಹೇಳಿಕೆ: ಅಮೆರಿಕ ಖಂಡನೆ

ಅಣ್ವಸ್ತ್ರ ಕುರಿತ ಪುಟಿನ್‌ ಅವರ ಹೇಳಿಕೆ ಖಂಡಿಸಿರುವ ಅಮೆರಿಕ, ‘ಅಣ್ವಸ್ತ್ರ ಬಳಕೆ ಕುರಿತು ಬಾಯಿಗೆ ಬಂದಂತೆ ಮಾತನಾಡುವುದುಸಂಪೂರ್ಣ ಬೇಜವಾಬ್ದಾರಿತನವೆಂದು ನಾವು ಭಾವಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದೆ.

‘ಇದು ಅಪಾಯಕಾರಿ ಮತ್ತು ಶೀತಲ ಸಮರದ ನಂತರ ಅಣ್ವಸ್ತ್ರ ರಹಿತ ಆಡಳಿತಕ್ಕೆ ಬದ್ಧವಾಗಿರಬೇಕಾದ ಆಶಯಕ್ಕೆವಿರುದ್ಧವಾಗಿದೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರನೆಡ್ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದರು.

ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್‌ ‘ಸದ್ಯ ಒಂದು ವಿಷಯ ಬದಲಾಗಿದೆ; ಮೀತಿ ದಾಟದಂತೆ ವಿಶ್ವಸಮುದಾಯ ಹೇರಿದ ಒತ್ತಡದ ಪ್ರತಿಫಲವಾಗಿ ಅಣ್ವಸ್ತ್ರ ಬೆದರಿಕೆಯನ್ನು ರಷ್ಯಾ ನಿಲ್ಲಿಸಿದೆ.ತಕ್ಷಣವೇ ಯುದ್ಧ ನಿಲ್ಲಿಸುವುದು ಮತ್ತು ತನ್ನ ಸೇನೆ ಹಿಂತೆಗೆದುಕೊಳ್ಳುವುದು ರಷ್ಯಾದ ಆದ್ಯತೆಯಾಗಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.