ADVERTISEMENT

Quad Summit | ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಇಲ್ಲ: ವರದಿ

ಪಿಟಿಐ
Published 31 ಆಗಸ್ಟ್ 2025, 2:47 IST
Last Updated 31 ಆಗಸ್ಟ್ 2025, 2:47 IST
<div class="paragraphs"><p>ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್</p></div>

ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್

   

ಪಿಟಿಐ ಚಿತ್ರ

ವಾಷಿಂಗ್ಟನ್‌: ‘ವರ್ಷದ ಕೊನೆಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಕ್ವಾಡ್‌ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾಗವಹಿಸದಿರುವ ಸಾಧ್ಯತೆಯಿದೆ’ ಎಂದು ಸುದ್ದಿಸಂಸ್ಥೆ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ.

ADVERTISEMENT

ಆದರೆ, ಈ ಬಗ್ಗೆ ಶ್ವೇತಭವನದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

‘ದಿ ನೊಬೆಲ್‌ ಪ್ರೈಸ್‌ ಆ್ಯಂಡ್ ಎ ಟೆಸ್ಟಿ ಫೋನ್‌ ಕಾಲ್‌–ಹೌ ದ ಟ್ರಂಪ್‌–ಮೋದಿ ರಿಲೇಶನ್‌ಷಿಪ್‌ ಅನ್‌ರಾವೆಲ್ಡ್‌’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಅಮೆರಿಕ ಮತ್ತು ಭಾರತ ನಡುವೆ ಹದಗೆಡುವುತ್ತಿರುವ ದ್ವಿಪಕ್ಷೀಯ ಸಂಬಂಧದ ಬಗ್ಗೆ ಈ ವರದಿ ವಿವರಿಸಿದೆ.

ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರು ನೀಡಿರುವ ಆಹ್ವಾನವನ್ನು ಅಧ್ಯಕ್ಷ ಟ್ರಂಪ್‌ ಅವರು ಒಪ್ಪಿಕೊಂಡಿದ್ದಾರೆ ಎಂದು ಈ ಮೊದಲು ಕೇಂದ್ರ ಸರ್ಕಾರ ತಿಳಿಸಿತ್ತು. ಇದೀಗ ಅಂತಹ ಯಾವುದೇ ಯೋಜನೆಯನ್ನು ಟ್ರಂಪ್ ಅವರು ಹೊಂದಿಲ್ಲ ಎಂದು ಟ್ರಂಪ್‌ ಅವರ ವೇಳಾಪಟ್ಟಿ ತಯಾರಿಸುವವರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಭಾರತದ ಸ್ಪಷ್ಟ ನಿರಾಕರಣೆಯ ನಂತರವೂ ಭಾರತ–ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿರುವುದಾಗಿ ಟ್ರಂಪ್ ಅವರು ಪದೇ ಪದೇ ಹೇಳುತ್ತಿರುವುದು, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದು ಭಾರತ– ಅಮೆರಿಕದ ನಡುವೆ ಸಂಬಂಧ ಹಳಸಲು ಪ್ರಮುಖ ಕಾರಣವಾಗಿದೆ.

ಪಾಕಿಸ್ತಾನ ಸೇನಾ ಮುಖ್ಯಸ್ಥನಿಗೆ ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು. ಜಿ7 ಶೃಂಗಸಭೆಯ ನಂತರ ಜೂನ್‌ 17ರಂದು ನಡೆದ ದೂರವಾಣಿ ಸಂಭಾಷಣೆ ಉಭಯ ನಾಯಕರ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿತ್ತು ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.