ADVERTISEMENT

ರಿಷಿ ಅಧಿಕಾರ ಸ್ವೀಕಾರ; ಸಮಸ್ಯೆ ಪರಿಹರಿಸುವುದೇ ಗುರಿ -ನೂತನ ಪ್ರಧಾನಿ

ಸಮಸ್ಯೆ ಪರಿಹರಿಸುವುದೇ ಗುರಿ: ನೂತನ ಪ್ರಧಾನಿ

ಏಜೆನ್ಸೀಸ್
Published 25 ಅಕ್ಟೋಬರ್ 2022, 21:00 IST
Last Updated 25 ಅಕ್ಟೋಬರ್ 2022, 21:00 IST
ಬ್ರಿಟನ್‌ನ ಹೊಸ ಪ್ರಧಾನಿ ರಿಷಿ ಸುನಕ್ ಅವರು ಬಕಿಂಗ್‌ಹ್ಯಾಮ್‌ ಅರಮನೆಗೆ ತೆರಳಿ ರಾಜ ಮೂರನೇ ಚಾರ್ಲ್ಸ್‌ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ
ಬ್ರಿಟನ್‌ನ ಹೊಸ ಪ್ರಧಾನಿ ರಿಷಿ ಸುನಕ್ ಅವರು ಬಕಿಂಗ್‌ಹ್ಯಾಮ್‌ ಅರಮನೆಗೆ ತೆರಳಿ ರಾಜ ಮೂರನೇ ಚಾರ್ಲ್ಸ್‌ ಅವರನ್ನು ಭೇಟಿಯಾದರು –ಪಿಟಿಐ ಚಿತ್ರ   

ಲಂಡನ್‌ : ‘ದೇಶದ ಮುಂದೆ ಇರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿಯೇ ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ’ ಎಂದು ಬ್ರಿಟನ್‌ನ ಹೊಸ ಪ್ರಧಾನಿ ರಿಷಿ ಸುನಕ್ ಮಂಗಳವಾರ ಹೇಳಿದರು.

ವಸಾಹತುಶಾಹಿ ದೇಶವಾಗಿದ್ದ ಬ್ರಿಟನ್‌ನ ಪ್ರಧಾನಿಯಾಗಿ ರಿಷಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟನ್‌ನ ಪ್ರಧಾನಿಯಾಗಿ ಭಾರತ ಮೂಲದ ವ್ಯಕ್ತಿಯೊಬ್ಬರು ಆಯ್ಕೆಯಾಗಿ ಇತಿಹಾಸ ನಿರ್ಮಾಣವಾಗಿದೆ.

ಅಧಿಕಾರ ವಹಿಸಿಕೊಂಡ ಬಳಿಕ ರಿಷಿ ಅವರು ಪ್ರಧಾನಿಯ ಅಧಿಕೃತ ನಿವಾಸದ ಹೊರಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಲಿಜ್‌ ಟ್ರಸ್‌ ಅವರು 49 ದಿನ ನಡೆಸಿದ ಸಂಕಷ್ಟಮಯ ಆಳ್ವಿಕೆಯ ಹಲವು ತಪ್ಪುಗಳು ಗಂಭೀರವಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿವೆ ಎಂದು ರಿಷಿ ದೂಷಿಸಿದ್ದಾರೆ.

ADVERTISEMENT

‘ನಾನು ದೇಶದಲ್ಲಿ ಒಗ್ಗಟ್ಟು ಮೂಡಿಸುತ್ತೇನೆ, ಅದು ಪದಗಳ ಮೂಲಕ ಅಲ್ಲ, ಕ್ರಿಯೆಯ ಮೂಲಕ’ ಎಂದು ಅವರು ಹೇಳಿದರು.

ಕ್ಲಿಷ್ಟಕರವಾದ ಬಜೆಟ್‌ ಅನ್ನು ಮುಂದಿನ ದಿನಗಳಲ್ಲಿ ಮಂಡಿಸ ಬೇಕಾಗ ಬಹುದು ಎಂಬ ಎಚ್ಚರಿಕೆ ನೀಡಿದ ಅವರು, ಉಕ್ರೇನ್‌ಗೆ ನೀಡುತ್ತಿರುವ ಬೆಂಬಲ ನಿಲ್ಲದು ಎಂಬ ಭರವಸೆ ಕೊಟ್ಟರು.

‘ಟ್ರಸ್‌ ಅವರ ಅವಧಿಯಲ್ಲಿ ಭಾರಿ ನಷ್ಟಕ್ಕೆ ಕಾರಣವಾದ ಕಿರು–ಬಜೆಟ್‌ನ ಉದ್ದೇಶ ಒಳ್ಳೆಯದೇ ಇತ್ತು. ಪ್ರಗತಿಗೆ ಒತ್ತು ನೀಡುವ ಗುರಿಯನ್ನೂ ಅದು ಹೊಂದಿತ್ತು. ಆದರೆ, ತೆರಿಗೆ ಕಡಿತದ ನಿರ್ಧಾರವು ತಪ್ಪು ಆಗಿತ್ತು’ ಎಂದರು.

ಅವಧಿಗೆ ಮುನ್ನವೇ ಚುನಾವಣೆ ನಡೆಯಬೇಕು ಎಂಬ ಲೇಬರ್‌ ಪಕ್ಷದ ಬೇಡಿಕೆಯನ್ನು ರಿಷಿ ಅವರು ತಳ್ಳಿ ಹಾಕಿದ್ದಾರೆ. ಇಪ್ಸಾಸ್‌ ಎಂಬ ಸಮೀಕ್ಷಾ ಸಂಸ್ಥೆಯು ನಡೆಸಿದ ಸಮೀಕ್ಷೆಯು ಶೇ 62ರಷ್ಟು ಜನರು ಅವಧಿಪೂರ್ವ ಚುನಾವಣೆ ಬಯಸಿದ್ದಾರೆ ಎಂದಿದೆ.

ರಿಷಿ ಅವರ ಕನ್ಸರ್ವೇಟಿವ್ ಪಕ್ಷದಲ್ಲಿ ಬಿರುಕು ಮೂಡಿದೆ. ಒಳಜ ಗಳ ತೀವ್ರಗೊಂಡಿದೆ. ಹಾಗಾಗಿ, ಪಕ್ಷವನ್ನು ಸರಿದಾರಿಯಲ್ಲಿ ಒಯ್ಯುವ ಹೊಣೆಗಾರಿಕೆಯೂ ರಿಷಿ ಅವರ ಮುಂದಿದೆ.

ಭಾರತಕ್ಕೆ ಅನುಕೂಲ?

ಭಾರತ ಮತ್ತು ಬ್ರಿಟನ್‌ ನಡುವಣ ಸಂಬಂಧವು ರಿಷಿ ಅವರ ಅವಧಿಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದು ಹೇಳಲಾಗಿದೆ.

‘ಭಾರತದಲ್ಲಿ ಅಪಾರ ಅವಕಾಶಗಳಿವೆ. ಈ ಸಜೀವ ಸೇತುವೆಯು ನಿಜವೇ ಆಗಬೇಕಿದ್ದರೆ ಬ್ರಿಟನ್‌ನ ಜನರು ಜಾಗತಿಕ ಮಟ್ಟದ ಸಂಸ್ಥೆಗಳಲ್ಲಿ ಕಲಿಯಲು ಮತ್ತು ಅದ್ಭುತವಾದ ನವೋದ್ಯಮಗಳಲ್ಲಿ ಕೆಲಸ ಮಾಡಲು ಭಾರತಕ್ಕೆ ಹೋಗುವುದನ್ನು ಸುಲಭಗೊಳಿಸಬೇಕು’ ಎಂದು ರಿಷಿ ಅವರು ಹಣಕಾಸು ಸಚಿವರಾಗಿದ್ದಾಗ ಹೇಳಿದ್ದರು.

ರಿಷಿ ಕುರಿತು ಹೆಮ್ಮೆ: ನಾರಾಯಣಮೂರ್ತಿ

‘ರಿಷಿಗೆ ಅಭಿನಂದನೆಗಳು. ಅವರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ಬ್ರಿಟನ್‌ನ ಜನರಿಗಾಗಿ ಅವರು ತಮ್ಮ ಶಕ್ತಿ ಮೀರಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಿಷಿ ಅವರು ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಅವರನ್ನು ಮದುವೆ ಆಗಿದ್ದಾರೆ.

ಉಪಪ್ರಧಾನಿ ರಾಬ್‌

ಡೊಮಿನಿಕ್ ರಾಬ್‌ ಅವರನ್ನು ಉಪಪ್ರಧಾನಿಯಾಗಿ ರಿಷಿ ಅವರು ನೇಮಿಸಿದ್ದಾರೆ. ಟ್ರಸ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಜೆರೆಮಿ ಹಂಟ್‌ ಅವರನ್ನು ಉಳಿಸಿಕೊಳ್ಳಲಾಗಿದೆ. ಟ್ರಸ್‌ ಸಂಪುಟದಲ್ಲಿದ್ದ ನಾಲ್ವರಿಗೆ ರಾಜೀನಾಮೆ ನೀಡಲು ಸೂಚಿಸಲಾಗಿದೆ.

ಆರೂವರೆ ಸಾವಿರ ಕೋಟಿ ಒಡೆಯ

ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರು ಸುಮಾರು ₹6,531 ಕೋಟಿ (700 ದಶಲಕ್ಷ ಪೌಂಡ್‌) ಮೊತ್ತದ ಆಸ್ತಿಯ ಒಡೆಯರಾಗಿದ್ದಾರೆ.ಯಾರ್ಕ್‌ಶೈರ್‌ನಲ್ಲಿ ದೊಡ್ಡ ಬಂಗಲೆಯನ್ನು ಹೊಂದಿ ದ್ದಾರೆ. ಸುನಕ್‌ ಮತ್ತು ಅವರ ಪತ್ನಿ ಅಕ್ಷತಾ ಅವರು ಲಂಡನ್‌ನ ಕೇಂದ್ರ ಭಾಗದ ಕೆನ್‌ಸಿಂಗ್ಟನ್‌ನಲ್ಲೂ ಆಸ್ತಿಯನ್ನು ಹೊಂದಿದ್ದಾರೆ. ರಾಜಕಾರಣಕ್ಕೆ ಪ್ರವೇಶಿಸುವ ಮೊದಲು ಅವರು ಇನ್ವೆಸ್ಟ್‌ಮೆಂಟ್‌ ಬ್ಯಾಂಕರ್‌ ಆಗಿದ್ದರು.

ಹಳೆಯ ಪೋಡಿಯಂ ಬಳಸಿ ಭಾಷಣ

ಸುನಕ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಈ ಹಿಂದಿನ ಆಡಳಿತದಲ್ಲಿ
ಬಳಸಿದ್ದ ಪೋಡಿಯಂ ಅನ್ನೇ ಬಳಸಿದರು.ನೂತನ ಪ್ರಧಾನಿಗಳು ಹೊಸ ಪೋಡಿಯಂ ಬಳಸಿಯೇ ಭಾಷಣ ಮಾಡುತ್ತಾರೆ. ಆದರೆ ಹೊಸ ಪೋಡಿಯಂ ವಿನ್ಯಾಸಕ್ಕೆ ಸಮಯ ಇರದ ಕಾರಣ ಹಳೆಯ ಪೋಡಿಯಂ ಬಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.