ADVERTISEMENT

ಬ್ರಿಟನ್‌ ಪ್ರಧಾನಿ ಪಟ್ಟ: ಸೋಮವಾರ ಘೋಷಣೆ

ಇಂಧನ ಬಿಕ್ಕಟ್ಟು ನಿವಾರಣೆಗೆ ರಿಷಿ ಸುನಕ್‌–ಲಿಜ್‌ ಟ್ರಸ್‌ ವಾಗ್ದಾನ

ಪಿಟಿಐ
Published 4 ಸೆಪ್ಟೆಂಬರ್ 2022, 19:03 IST
Last Updated 4 ಸೆಪ್ಟೆಂಬರ್ 2022, 19:03 IST
ಲಿಜ್‌ ಟ್ರಸ್‌, ರಿಷಿ ಸುನಕ್
ಲಿಜ್‌ ಟ್ರಸ್‌, ರಿಷಿ ಸುನಕ್   

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಿಯ ಆಯ್ಕೆ ಸೋಮವಾರ ನಡೆಯಲಿದ್ದು, ಅಂತಿಮವಾಗಿ ಕಣದಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್‌ ಅವರು ಇಂಧನ ಬಿಕ್ಕಟ್ಟನ್ನು ಬಗೆಹರಿಸಿ ದೇಶದ ಜನತೆಯನ್ನು ಬೆಲೆ ಏರಿಕೆಯ ಆಘಾತದಿಂದ ಪಾರು ಮಾಡುವ ವಾಗ್ದಾನ ನೀಡಿದ್ದಾರೆ.

ರಿಷಿ ಸುನಕ್ ಅವರು ಕಡಿಮೆ ಆದಾಯದ ಜನರನ್ನು ಗುರಿಯಾಗಿಟ್ಟುಕೊಂಡು ತಮ್ಮ ಪ್ರಚಾರ ಕಾರ್ಯ ನಡೆಸಿದ್ದರೆ, ಲಿಜ್ ಟ್ರಸ್‌ ಅವರು ಜನರನ್ನು ಬೆಲೆ ಏರಿಕೆಯಿಂದ ಪಾರು ಮಾಡಲು ಏನು ಕ್ರಮ ಕೈಗೊಳ್ಳುವರು ಎಂಬುದನ್ನು ಬಹಿರಂಗವಾಗಿ ಹೇಳಿಲ್ಲ, ಕನ್‌ಸರ್ವೇಟಿವ್‌ ಪಾರ್ಟಿ ನಾಯಕಿಯಾಗಿ ಆಯ್ಕೆಯಾದರೆ ‘ತಕ್ಷಣ ಕ್ರಮ’ ಕೈಗೊಳ್ಳುವ ಭರವಸೆಯನ್ನಷ್ಟೇ ಅವರು ನೀಡಿದ್ದಾರೆ.

ಇದುವರೆಗೆ ನಡೆದ ಹೆಚ್ಚಿನ ಎಲ್ಲಾ ಸಮೀಕ್ಷೆಗಳೂ 47 ವರ್ಷದ ಲಿಜ್ ಟ್ರಸ್‌ ಅವರೇ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂದಿದ್ದಾರೆ ಎಂದು ಹೇಳಿದ್ದು, 42 ವರ್ಷದ ರಿಷಿ ಸುನಕ್‌ ಅವರಿಗೆ ಸೋಲು ಉಂಟಾಗಬಹುದು ಎಂದು ಹೇಳಿವೆ. ಇದೇ ಪ್ರಥಮ ಬಾರಿಗೆ ಭಾರತೀಯ ಮೂಲದ ರಾಜಕಾರಣಿಯೊಬ್ಬರು ಬ್ರಿಟಿಷ್‌ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಿದ್ದಾರೆ. ಟ್ರಸ್‌ ಅವರು ಆಯ್ಕೆಯಾದರೆ, ಮಾರ್ಗರೇಟ್‌ ಥ್ಯಾಚರ್‌ ಮತ್ತು ಥೆರೆಸಾ ಮೇ ಅವರ ಬಳಿಕ ಪ್ರಧಾನಿ ಪಟ್ಟ ಏರಿದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ADVERTISEMENT

ಟೋರಿ ಸಂಸದರ ಬಳಗದಲ್ಲಿ ಸುನಕ್‌ ಅವರೇ ಪ್ರಧಾನಿ ಪಟ್ಟದ ನೆಚ್ಚಿನ ಅಭ್ಯರ್ಥಿಯಾಗಿದ್ದರು. ಆದರೆ ಆನ್‌ಲೈನ್‌ ಮತ್ತು ಅಂಚೆ ಮೂಲಕ ಚಲಾವಣೆಯಾದ 1.60 ಲಕ್ಷ ಮತಗಳಲ್ಲಿ ಲಿಜ್ ಟ್ರಸ್‌ ಅವರು ಸುನಕ್ ಅವರನ್ನು ಹಿಂದಿಕ್ಕಿರುವುದು ಸಮೀಕ್ಷೆಗಳಿಂದ ದೃಢಪಟ್ಟಿದೆ. ಸೋಮವಾರ ಮಧ್ಯಾಹ್ನ 12.30ಕ್ಕೆ (ಸ್ಥಳೀಯ ಕಾಲಮಾನ) ಪ್ರಧಾನಿ ಸ್ಪರ್ಧೆಯಲ್ಲಿ ಗೆದ್ದವರ ಹೆಸರನ್ನು ಚುನಾವಣಾ ಅಧಿಕಾರಿ ಸರ್‌ ಗ್ರಹಾಂ ಬ್ರಾಡಿ ಪ್ರಕಟಿಸಲಿದ್ದಾರೆ.

ಸುವೆಲ್ಲಾ ಬ್ರೇವರ್‌ಮನ್‌ಗೆ ಸಚಿವ ಸ್ಥಾನ?

ಒಂದು ವೇಳೆ ಲಿಜ್‌ ಟ್ರಸ್‌ ಅವರು ಪ್ರಧಾನಿಯಾಗಿ ಆಯ್ಕೆಯಾದರೆ ಅವರ ಸಂಪುಟದಲ್ಲಿ ಭಾರತೀಯ ಮೂಲದ ಸುವೆಲ್ಲಾ ಬ್ರೇವರ್‌ಮನ್‌ ಅವರು ಸಚಿವರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಸದ್ಯ ಅಟಾರ್ನಿ ಜನರಲ್‌ ಆಗಿರುವ ಗೋವಾ ಮೂಲದ ಸುವೆಲ್ಲಾ ಅವರೂ ಆರಂಭಿಕ ಹಂತದಲ್ಲಿ ಪ್ರಧಾನಿ ಸ್ಪರ್ಧೆಯಲ್ಲಿದ್ದರು. ಎರಡನೇ ಸುತ್ತಿನ ಮತದಾನದ ಬಳಿಕ ಅವರು ಸ್ಪರ್ಧೆಯಿಂದ ಹೊರಬಿದ್ದಿದ್ದರು, ಬಳಿಕ ಟ್ರಸ್‌ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಅವರು ಪ್ರೀತಿ ಪಟೇಲ್‌ ಹೊಂದಿದ್ದ ಗೃಹ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.