ADVERTISEMENT

ದೇಶದ ಅಸ್ತಿತ್ವಕ್ಕೆ ಆತಂಕ ಎದುರಾದರೆ ಮಾತ್ರ ಅಣ್ವಸ್ತ್ರ ಬಳಕೆ: ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 10:02 IST
Last Updated 29 ಮಾರ್ಚ್ 2022, 10:02 IST
ಉಕ್ರೇನ್‌ನ ವಸತಿ ಸಮುಚ್ಛಯದ ಮೇಲೆ ರಷ್ಯಾ ದಾಳಿ: ಪಿಟಿಐ ಚಿತ್ರ
ಉಕ್ರೇನ್‌ನ ವಸತಿ ಸಮುಚ್ಛಯದ ಮೇಲೆ ರಷ್ಯಾ ದಾಳಿ: ಪಿಟಿಐ ಚಿತ್ರ   

ಮಾಸ್ಕೋ: ‘ದೇಶದ ಅಸ್ತಿತ್ವಕ್ಕೆ ಆತಂಕ ಎದುರಾದರೆ ಮಾತ್ರ ರಷ್ಯಾ ಅಣ್ವಸ್ತ್ರಗಳನ್ನು ಬಳಸುತ್ತದೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಪಿಬಿಎಸ್ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಮ್ಮ ದೇಶದ ಅಸ್ತಿತ್ವಕ್ಕೆ ಆತಂಕ ಎದುರಾದರೆ ಆ ಆತಂಕವನ್ನು ತೊಡೆದುಹಾಕಲು ನಾವು ಅಣ್ವಸ್ತ್ರಗಳನ್ನು ಬಳಸಬಹುದು ಎಂದು ನಮ್ಮ ಭದ್ರತಾ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ’ ಎಂದು ಅವರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣ ಆರಂಭವಾದ ಕೆಲ ದಿನಗಳ ಬಳಿಕ ಫೆಬ್ರುವರಿ 28ರಂದು ದೇಶದ ಅಣ್ವಸ್ತ್ರಗಳನ್ನು ಸನ್ನದ್ಧವಾಗಿರಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು. ಇದರಿಂದಾಗಿ ಇಡೀ ವಿಶ್ವವೇ ಆತಂಕಕ್ಕೆ ದೂಡಲ್ಪಟ್ಟಿತ್ತು.

ADVERTISEMENT

ಉಕ್ರೇನ್ ಮೇಲಿನ ಆಕ್ರಮಣದಿಂದಾದ ಪರಿಣಾಮಗಳು ಸದ್ಯ ಅಣ್ವಸ್ತ್ರ ಬಳಕೆ್ಗೆ ಸೂಕ್ತ ಕಾರಣಗಳಲ್ಲ ಎಂದು ಸೋಮವಾರದ ಸಂದರ್ಶನದಲ್ಲಿ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ.

ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್, ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಆ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ ಎಂದಿದ್ದಾರೆ.

ಫೆಬ್ರುವರಿ 24ರಿಂದ ರಷ್ಯಾದ ಸೇನಾಪಡೆ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದ್ದು, ಎರಡೂ ಕಡೆಯ ಸಾವಿರಾರು ಸೈನಿಕರು ಮೃತಪಟ್ಟಿದ್ದಾರೆ. ಉಕ್ರೇನ್‌ನ ಹಲವು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹಲವು ಸುತ್ತಿನ ಶಾಂತಿ ಮಾತುಕತೆಗಳು ವಿಫಲಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.