ADVERTISEMENT

ಫೇಸ್‌ಬುಕ್, ಟ್ವಿಟರ್ ಮೇಲೆ ನಿಷೇಧ ಹೇರಿದ ರಷ್ಯಾ

ರಾಯಿಟರ್ಸ್
Published 5 ಮಾರ್ಚ್ 2022, 4:07 IST
Last Updated 5 ಮಾರ್ಚ್ 2022, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೊ: ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾರತಮ್ಯ ತೋರಿದೆ ಎಂದು ಆರೋಪಿಸಿರುವ ರಷ್ಯಾದ ಮಾಧ್ಯಮ ನಿಯಂತ್ರಕ (Roskomnadzor), ಫೇಸ್‌ಬುಕ್ ಹಾಗೂ ಟ್ವಿಟರ್ ಮೇಲೆ ನಿಷೇಧ ಹೇರಿದೆ.

ಇದರ ಜೊತೆಗೆ ಬಿಬಿಸಿ, ಆ್ಯಪಲ್ ಹಾಗೂ ಗೂಗಲ್ ಆ್ಯಪ್ ಸ್ಟೋರ್‌ಗಳ ಮೇಲೂ ನಿರ್ಬಂಧ ಹೇರಲಾಗಿದೆ.

ಉಕ್ರೇನ್ ಸಂಘರ್ಷದ ವರದಿಗೆ ಸಂಬಂಧಿಸಿದಂತೆ ರಷ್ಯಾ ಮಾಧ್ಯಮಗಳ ಮೇಲೆ ಫೇಸ್‌ಬುಕ್ ಹಾಗೂ ಟ್ವಿಟರ್ ನಿರ್ಬಂಧವನ್ನು ಹೇರಿತ್ತು. ಈ ತಾರತಮ್ಯ ಧೋರಣೆಯನ್ನು ಖಂಡಿಸಿರುವ ರಷ್ಯಾ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

2020 ಅಕ್ಟೋಬರ್‌ನಿಂದ ರಷ್ಯಾದ ಮಾಧ್ಯಮಗಳ ಮೇಲೆ ನಿರ್ಬಂಧಕ್ಕೆ ಸಂಬಂಧಿಸಿದಂತೆ 26 ಪ್ರಕರಣ ಫೇಸ್‌ಬುಕ್ ದಾಖಲಿಸಿದೆ. ಆರ್‌ಟಿ ಮತ್ತು ಆರ್‌ಐಎ ನ್ಯೂಸ್ ಏಜೆನ್ಸಿ ಮೇಲಿನ ಇತ್ತೀಚಿನ ನಿರ್ಬಂಧಗಳು ಇದು ಒಳಗೊಂಡಿವೆ ಎಂದು ಹೇಳಿದೆ.

ಈ ನಡುವೆ ಫೇಸ್‌ಬುಕ್ ಮೇಲಿನ ನಿರ್ಬಂಧ ತೆರವುಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದು ಮೆಟಾ ಅಧ್ಯಕ್ಷ ನಿಕ್ ಕ್ಲೆಗ್ ತಿಳಿಸಿದ್ದಾರೆ.

ಇದಕ್ಕೆ ಸಮಾನವಾಗಿ ಟ್ವಿಟರ್ ಮೇಲೂ ರಷ್ಯಾ ನಿಷೇಧ ಹೇರಿದೆ.

ಏತನ್ಮಧ್ಯೆ ಉಕ್ರೇನ್ ಯುದ್ಧಕ್ಕೆ ಸಂಬಂಧಪಟ್ಟಂತೆ ನಕಲಿ ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ. ಯುದ್ಧದ ಕುರಿತಾಗಿ ರಷ್ಯಾದ ವಿರುದ್ಧ ತಪ್ಪು ಮಾಹಿತಿ ನೀಡಿದವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.