ADVERTISEMENT

ಕದನ ವಿರಾಮಕ್ಕೆ ರಷ್ಯಾ–ಉಕ್ರೇನ್ ಒಪ್ಪಿಗೆ, ಮುಂದಿನ ತಿಂಗಳು ಮಾತುಕತೆ

ಏಜೆನ್ಸೀಸ್
Published 27 ಜನವರಿ 2022, 2:39 IST
Last Updated 27 ಜನವರಿ 2022, 2:39 IST
ಉಕ್ರೇನ್ ಸೇನೆ
ಉಕ್ರೇನ್ ಸೇನೆ   

ಪ್ಯಾರಿಸ್: ಉಕ್ರೇನ್‌ನಲ್ಲಿ ಏರ್ಪಟ್ಟಿದ್ದ ಉದ್ವಿಗ್ನ ವಾತಾವರಣ ತಾತ್ಕಾಲಿಕ ಶಮನವಾಗಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ 8 ತಾಸುಗಳವರೆಗೆ ಸಾಗಿದ ಸುದೀರ್ಘ ಮಾತುಕತೆಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಈ ಒಪ್ಪಂದಕ್ಕೆ ಬಂದಿದ್ದಾರೆ.

ಉಕ್ರೇನ್‌ ಪೂರ್ವದ ಗಡಿಯ ಸಮೀಪದಲ್ಲಿ ರಷ್ಯಾದ ಪಡೆಗಳ ನಿಯೋಜನೆಯಿಂದಾಗಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ರಷ್ಯಾ ಸೇನೆ ಉಕ್ರೇನ್ ಮೇಲೆ ಆಕ್ರಮಣ ನಡೆಸಿದರೆ ಪ್ರತಿ ದಾಳಿ ನಡೆಸಲು ಅಮೆರಿಕಹಾಗೂ ನ್ಯಾಟೋ ಪಡೆಗಳು ಸಜ್ಜುಗೊಂಡಿದ್ದವು.

ಈ ಮಧ್ಯೆ, ಫ್ರಾನ್ಸ್ ಹಾಗೂ ಜರ್ಮನಿಯ ಮಧ್ಯಸ್ಥಿಕೆಯೊಂದಿಗೆ ನಡೆದ ಮಾತುಕತೆ ಫಲ ನೀಡಿದೆ. ಮುಂದಿನ ತಿಂಗಳು ಜರ್ಮನಿಯ ಬರ್ಲಿನ್‌ನಲ್ಲಿ ಗಡಿ ವಿವಾದದ ಬಗ್ಗೆ ತಾಜಾ ಮಾತುಕತೆ ಆರಂಭಿಸಲು ಉಭಯ ದೇಶಗಳು ನಿರ್ಧರಿಸಿವೆ.

2014ರಿಂದ ನಾಲ್ಕು ರಾಷ್ಟ್ರಗಳು ಪೂರ್ವ ಉಕ್ರೇನ್‌ನಲ್ಲಿ ಶಾಂತಿ ನೆಲೆಗೊಳಿಸುವ ಸಲುವಾಗಿ ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿವೆ. ಈ ನಾಲ್ಕು ರಾಷ್ಟ್ರಗಳ ಗುಂಪನ್ನು 'ನಾರ್ಮಂಡಿ ಗ್ರೂಪ್' ಎಂದು ಕರೆಯಲಾಗುತ್ತದೆ.

2019ರ ಬಳಿಕ ಮೊದಲ ಬಾರಿಗೆ ರಷ್ಯಾ-ಉಕ್ರೇನ್ ದೇಶಗಳು ಫ್ರಾನ್ಸ್ ಹಾಗೂ ಜರ್ಮನಿಯ ಉಪಸ್ಥಿತಿಯೊಂದಿಗೆ ಜಂಟಿ ಹೇಳಿಕೆಗೆ ಸಹಿ ಹಾಕಲು ಒಪ್ಪಿಕೊಂಡಿವೆ. ಅಲ್ಲದೆ ಜಂಟಿ ಹೇಳಿಕೆಯಲ್ಲಿ ಎರಡೂ ಕಡೆಯವರು ಕದನ ವಿರಾಮಕ್ಕೆ ಬದ್ಧವಾಗಿದ್ದಾರೆ ಎಂದು ಪ್ರತಿಪಾದಿಸಿವೆ. ಹಾಗೆಯೇ ಎರಡು ವಾರಗಳಲ್ಲಿ ಬರ್ಲಿನ್‌ನಲ್ಲಿ ಮತ್ತೆ ಭೇಟಿಯಾಗುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.