ADVERTISEMENT

ಉಕ್ರೇನ್‌ ಸಂಘರ್ಷ | ರಷ್ಯಾದ ರಕ್ಷಣಾ ವಲಯದ ಮೇಲೆ ಮತ್ತಷ್ಟು ನಿರ್ಬಂಧ: ಕೆನಡಾ

ಐಎಎನ್ಎಸ್
Published 12 ಏಪ್ರಿಲ್ 2022, 2:16 IST
Last Updated 12 ಏಪ್ರಿಲ್ 2022, 2:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಒಟ್ಟಾವ (ಕೆನಡಾ): ರಷ್ಯಾದ ರಕ್ಷಣಾ ವಲಯದ ಮೇಲೆ ಕೆನಡಾ ಹೊಸ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ತಿಳಿಸಿದ್ದಾರೆ.

ರಷ್ಯಾದ ರಕ್ಷಣಾ ವಲಯದ 33 ಘಟಕಗಳ ಮೇಲೆ ಹೊಸದಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕೆನಡಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟಕಗಳು ರಷ್ಯಾದ ಸೇನಾಪಡೆಗೆ ನೇರ ಅಥವಾ ಪರೋಕ್ಷ ಬೆಂಬಲವನ್ನು ಒದಗಿಸುತ್ತಿವೆ ಎಂದು ಹೇಳಲಾಗಿದೆ.

ADVERTISEMENT

ರಷ್ಯಾ- ಉಕ್ರೇನ್ ಸಂಘರ್ಷ ಪ್ರಾರಂಭವಾದಾಗಿನಿಂದ ರಷ್ಯಾ, ಉಕ್ರೇನ್ ಮತ್ತು ಬೆಲಾರಸ್‌ನ 700ಕ್ಕೂ ಹೆಚ್ಚು ವ್ಯಕ್ತಿಗಳು ಸೇರಿದಂತೆ ರಕ್ಷಣಾ ಘಟಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಕೆನಡಾ ಹೇಳಿದೆ.

ಫೆಬ್ರುವರಿ 24ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದರು, ಇದರ ಬೆನ್ನಲ್ಲೇ ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ವಾಯುನೆಲೆಗಳು, ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿಗಳನ್ನು ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಕೆನಡಾ, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ದಾಳಿಯಲ್ಲಿ ರಷ್ಯಾದ ಸುಮಾರು 12,000 ಸೈನಿಕರನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ನ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.