ಉಕ್ರೇನ್‌ನತ್ತ ದಾಳಿ ನಡೆಸುತ್ತಿರುವ ಯೋಧ
ರಾಯಿಟರ್ಸ್ ಚಿತ್ರ
ಮಾಸ್ಕೊ: ರಷ್ಯಾದ ಕಲುಗಾ ಪ್ರಾಂತ್ಯದ ಮೇಲೆ ಉಕ್ರೇನ್ ಪಡೆಗಳು ಶುಕ್ರವಾರ ತಡರಾತ್ರಿ ಡ್ರೋನ್ ದಾಳಿ ನಡೆಸಿದ್ದು, ತೈಲ ಸಂಗ್ರಹ ಘಟಕವು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದಾಗಿ ವರದಿಯಾಗಿದೆ.
ಈ ಪ್ರಾಂತ್ಯವು ರಾಜಧಾನಿ ಮಾಸ್ಕೊದ ದಕ್ಷಿಣಕ್ಕಿದೆ. ಇಲ್ಲಿನ ಗವರ್ನರ್ ವ್ಲಾಡಿಸ್ಲವ್ ಶಾಪ್ಶಾ ಅವರು, ಕೈಗಾರಿಕಾ ನಗರವಾದ ಲ್ಯುದಿನೊವೊದಲ್ಲಿ ಭಾರಿ ಹಾನಿಯಾಗಿದೆ ಎಂದು ಟೆಲಿಗ್ರಾಮ್ ಮೂಲಕ ತಿಳಿಸಿದ್ದಾರೆ. ಆದರೆ, ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಲ್ಯುದಿನೊವೊ ನಗರದಲ್ಲಿ ದಾಳಿ ನಡೆದಿದೆ ಎನ್ನಲಾದ ತೈಲ ಸಂಗ್ರಹಣಾ ಘಟಕದತ್ತ ಅಗ್ನಿಶಾಮಕ ವಾಹನಗಳು ಜಮಾಯಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿವೆ.
ಗಡಿ ಪ್ರದೇಶದಲ್ಲಿ ಉಕ್ರೇನ್‌ನ 9 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹಾಗೂ ಬ್ರಿಯಾಂಕ್ಸ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ.
ಮಿತ್ರ ರಾಷ್ಟ್ರ ಬೆಲಾರಸ್ ಗಡಿಯಲ್ಲಿರುವ ಸ್ಮಲೆನ್‌ಸ್ಕ್ ಪ್ರಾಂತ್ಯದ ಗವರ್ನರ್ ಅವರೂ, ಉಕ್ರೇನ್‌ನ ಐದು ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದಿದ್ದಾರೆ.
ರಷ್ಯಾದ ದಕ್ಷಿಣದ ವೊರೊನೆಝ್ ಪ್ರಾಂತ್ಯದ ತೈಲ ಸಂಗ್ರಹ ಘಟಕಕ್ಕೆ ಕನಿಷ್ಠ ಮೂರು ಡ್ರೋನ್‌ಗಳಾದರೂ ಅಪ್ಪಳಿಸಿವೆ ಎಂದು ಉಕ್ರೇನ್ ಸೇನೆ ಗುರುವಾರ ಹೇಳಿತ್ತು. ಹಾಗೆಯೇ, ರಷ್ಯಾ ಹಾರಿಸಿದ್ದ 50 ಡ್ರೋನ್‌ಗಳಲ್ಲಿ 33 ಅನ್ನು ಹೊಡೆದುರುಳಿಸಿದ್ದೇವೆ ಎಂದು ಶುಕ್ರವಾರ ಹೇಳಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.