ADVERTISEMENT

ನಿಲ್ಲದ ರಷ್ಯಾ–ಉಕ್ರೇನ್‌ ಕಾಳಗ: 198 ಸಾವು

ಕೀವ್‌ಗೆ ರಷ್ಯಾ ಸೇನೆ ನುಗ್ಗುವುದನ್ನು ತಡೆದ ಉಕ್ರೇನ್‌ ಯೋಧರು

ಏಜೆನ್ಸೀಸ್
Published 26 ಫೆಬ್ರುವರಿ 2022, 18:36 IST
Last Updated 26 ಫೆಬ್ರುವರಿ 2022, 18:36 IST
ಪೋಲೆಂಡ್‌ಗೆ ತೆರಳಲು ಪಶ್ಚಿಮ ಉಕ್ರೇನಿನ ಎಲ್ವಿವ್‌ ರೈಲು ನಿಲ್ದಾಣದಲ್ಲಿ ಶನಿವಾರ ಕಾಯುತ್ತಿದ್ದ ಜನ – ಎಎಫ್‌ಪಿ ಚಿತ್ರ
ಪೋಲೆಂಡ್‌ಗೆ ತೆರಳಲು ಪಶ್ಚಿಮ ಉಕ್ರೇನಿನ ಎಲ್ವಿವ್‌ ರೈಲು ನಿಲ್ದಾಣದಲ್ಲಿ ಶನಿವಾರ ಕಾಯುತ್ತಿದ್ದ ಜನ – ಎಎಫ್‌ಪಿ ಚಿತ್ರ   

ಕೀವ್‌: ಉಕ್ರೇನ್‌ನ ರಾಜಧಾನಿ ಕೀವ್‌ನ ಮೇಲೆ ದಾಳಿ ನಡೆಸಿದ ರಷ್ಯಾದ ಸೇನೆಯನ್ನು ಉಕ್ರೇನ್‌ನ ಸೇನೆ ಹಿಮ್ಮೆಟ್ಟಿಸಿದೆ. ಆದರೆ, ವಿಧ್ವಂಸಕ ಕೃತ್ಯ ಎಸಗುವ ರಷ್ಯಾದ ತಂಡವು ರಾಜಧಾನಿಗೆ ನುಸುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟವರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ. ಅದರಲ್ಲಿ ಮಕ್ಕಳೂ ಸೇರಿದ್ದಾರೆ.

ರಷ್ಯಾಕ್ಕೆ ಯಾವ ಕಾರಣಕ್ಕೂ ಮಣಿಯುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ, ಅಮೆರಿಕ ಮತ್ತು ಪಶ್ಚಿಮದ ದೇಶಗಳ ಪರವಾಗಿರುವ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾಗಿ ರಷ್ಯಾ ಹೇಳಿಕೊಂಡಿದೆ.

ರಷ್ಯಾ ದಾಳಿಯ ಮೂರನೇ ದಿನವೂ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಸ್ಫೋಟದ ಸದ್ದು ಅನುರಣಿಸಿದೆ. ಝೆಲೆನ್‌ಸ್ಕಿ ಅವರು ದೇಶದ ಜನರಿಗೆ ವಿಡಿಯೊ ಸಂದೇಶ ನೀಡಿದ್ದಾರೆ.

ADVERTISEMENT

1,16,000 ಜನರು ನಿರಾಶ್ರಿತರಾಗಿದ್ದು ಸಮೀಪದ ದೇಶಗಳಿಗೆ ಹೋಗಿದ್ದಾರೆ. ಯುದ್ಧದಿಂದ ಹೆಚ್ಚು ಬಾಧೆಗೆ ಒಳಗಾಗದ ಉಕ್ರೇನ್‌ನ ಪಶ್ಚಿಮದತ್ತ ಹಲವು ಮಂದಿ ಸಾಗಿದ್ದಾರೆ. ಯುದ್ಧ ಮುಂದುವರಿದರೆ ಇನ್ನೂ ಸಾವಿರಾರು ಜನರು ನಿರಾಶ್ರಿತರಾಗಲಿದ್ದಾರೆ ಎಂದು ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಹೇಳಿದೆ.

‘ಶತ್ರು ಪಡೆಯು ವಿವಿಧ ಭಾಗಗಳ ಮೂಲಕ ನಗರದೊಳಕ್ಕೆ ನುಗ್ಗಲು ಯತ್ನಿಸುತ್ತಿವೆ. ಆದರೆ, ಈ ಯತ್ನಗಳಿಗೆ ತಡೆ ಒಡ್ಡಲಾಗಿದೆ’ ಎಂದು ಕೀವ್‌ನ ಮೇಯರ್‌ ವಿಟಲಿ ಕ್ಲಿಷ್ಕೊ ಹೇಳಿದ್ದಾರೆ.

*ಉಕ್ರೇನ್‌ನಲ್ಲಿ 1,115 ಮಂದಿ ಗಾಯಗೊಂಡಿದ್ದಾರೆ. ಮೆಟ್ರೊ ಸುರಂಗಗಳು ಮತ್ತು ನೆಲ
ಮಾಳಿಗೆಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ

* ಬ್ರಿಟನ್‌ ಸೇರಿದಂತೆ ನ್ಯಾಟೊದ ಹಲವು ರಾಷ್ಟ್ರಗಳು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿವೆ

*ಪೂರ್ವ ಯುರೋಪ್‌ನಲ್ಲಿ 40,000 ಯೋಧರನ್ನು ನಿಯೋಜಿಸುವುದಾಗಿ ನ್ಯಾಟೊ ಹೇಳಿದೆ. ಆದರೆ, ಉಕ್ರೇನ್‌ಗೆ ಸೇನೆ ಕಳುಹಿಸುವುದಿಲ್ಲ ಎಂದು ಪುನರುಚ್ಚರಿಸಿದೆ

*ಸಂಜೆ 5 ಗಂಟೆಯ ಬಳಿಕ ಬೀದಿಗಳಲ್ಲಿ ಇರುವವರನ್ನು ‘ಶತ್ರುವಿನ ವಿಧ್ವಂಸಕ ಗುಂಪಿನ ಸದಸ್ಯರು ಮತ್ತು ಬೇಹುಗಾರರು’ ಎಂದು ಪರಿಗಣಿಸಲಾಗುವುದು ಎಂದು ಉಕ್ರೇನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.