ADVERTISEMENT

ಮಾನವೀಯ ಕಾರಿಡಾರ್ ಮೇಲೆ ಶೆಲ್ ದಾಳಿ, 4 ಮಕ್ಕಳಿಗೆ ಗಾಯ: ವೊಲೊಡಿಮಿರ್ ಝೆಲೆನ್‌ಸ್ಕಿ

ಏಜೆನ್ಸೀಸ್
Published 22 ಮಾರ್ಚ್ 2022, 2:16 IST
Last Updated 22 ಮಾರ್ಚ್ 2022, 2:16 IST
ವೊಲೊಡಿಮಿರ್ ಝೆಲೆನ್‌ಸ್ಕಿ
ವೊಲೊಡಿಮಿರ್ ಝೆಲೆನ್‌ಸ್ಕಿ   

ಕೀವ್: ಸೋಮವಾರ ಮಾನವೀಯ ಕಾರಿಡಾರ್‌ ಮೇಲೆಯೇ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿದ್ದು, ಸ್ಥಳಾಂತರಿಸಲಾಗುತ್ತಿರುವ ನಾಗರಿಕರಲ್ಲಿ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ವಿಡಿಯೊ ಭಾಷಣದಲ್ಲಿ ಹೇಳಿದ್ದಾರೆ.

ಮರಿಯುಪೋಲ್‌ನಿಂದ ತೆರಳುವವರ ಆರಂಭಿಕ ಆಶ್ರಯ ತಾಣವಾದ ಜಪೋರಿಝಿಯಾ ಪ್ರದೇಶದಲ್ಲಿ ರಷ್ಯಾ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದಿದ್ದಾರೆ.

ಮರಿಯುಪೋಲ್‌ನಿಂದ ಸುಮಾರು 3,000 ಜನರನ್ನು ಸೋಮವಾರ ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

ADVERTISEMENT

ಪಾಶ್ಚಿಮಾತ್ಯ ನಾಯಕರನ್ನು ಗುರುವಾರ (ಮಾ.24) ಭೇಟಿಯಾಗುವುದಕ್ಕೂ ಮುನ್ನ ಡಚ್ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.

ನನ್ನನ್ನು ನಂಬಿ, ನಮ್ಮ ಸ್ಥಿತಿಗತಿ ಕುರಿತು ಅವರಿಗೆ ಮನವರಿಕೆ ಮಾಡಲಾಗುತ್ತದೆ ಮತ್ತು ಬಲವಾಗಿ ವ್ಯಕ್ತಪಡಿಸಲಾಗುತ್ತದೆ' ಎಂದು ಹೇಳಿದ್ದಾರೆ.

ರಷ್ಯಾ ಪಡೆಗಳ ಆಕ್ರಮಣಕ್ಕೆ ತುತ್ತಾಗಿರುವ ಈ ನಗರ ಕಳೆದ 20 ದಿನಗಳಿಂದಲೂ ನೀರು, ವಿದ್ಯುತ್‌, ಸಾರಿಗೆ ಇತ್ಯಾದಿ ಮೂಲಸೌಲಭ್ಯಗಳನ್ನು ಕಳೆದುಕೊಂಡಿದೆ. ಈ ನಗರವೊಂದರಲ್ಲೇ ಈವರೆಗೆ 2,300 ನಾಗರಿಕರು ಹತರಾಗಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ ಸೇನೆ ಶರಣಾಗತಿ ತಿರಸ್ಕರಿಸಿದ ಬೆನ್ನಲ್ಲೇ ರಷ್ಯಾ ಪಡೆಗಳು ಮರಿಯುಪೊಲ್‌ ಮೇಲೆ ನಿರಂತರ ಬಾಂಬ್‌ ದಾಳಿ ಮುಂದುವರಿಸಿವೆ. ರಾಜಧಾನಿ ಕೀವ್‌ ನಗರ ಕೇಂದ್ರ ಭಾಗದ ವಾಣಿಜ್ಯ ಸಂಕೀರ್ಣ ಗುರಿಯಾಗಿಸಿ ಭಾನುವಾರ ತಡರಾತ್ರಿ ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಗೆ 8 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.