ADVERTISEMENT

ಶಾಂತಿ ಸ್ಥಾಪನೆ: ಯೋಜನೆ ಹಂಚಿಕೊಂಡ ರಷ್ಯಾ, ಉಕ್ರೇನ್‌

ಏಜೆನ್ಸೀಸ್
Published 2 ಜೂನ್ 2025, 15:19 IST
Last Updated 2 ಜೂನ್ 2025, 15:19 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಇಸ್ತಾಂಬುಲ್‌: ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಿ ಶಾಂತಿ ಸ್ಥಾಪಿಸುವ ಸಂಬಂಧದ ಯೋಜನೆಗಳನ್ನು ರಷ್ಯಾ ಮತ್ತು ಉಕ್ರೇನ್‌ ಇಲ್ಲಿ ನಡೆದ ನೇರ ಮಾತುಕತೆಯಲ್ಲಿ ಸೋಮವಾರ ಪರಸ್ಪರ ವಿನಿಮಯ ಮಾಡಿಕೊಂಡಿವೆ.

2022ರ ಫೆಬ್ರುವರಿಯಿಂದ ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದೆ. ಎರಡನೇ ವಿಶ್ವ ಯುದ್ಧದ ಬಳಿಕ ಯುರೋಪ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಸಂಘರ್ಷ ಇದಾಗಿದೆ.

ADVERTISEMENT

ಶಾಂತಿ ಸ್ಥಾಪನೆಗಾಗಿ ಮಾತುಕತೆ ನಡೆಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉಭಯ ರಾಷ್ಟ್ರಗಳನ್ನು ಒತ್ತಾಯಿಸಿದ್ದರು. ಆ ಬಳಿಕ ಮಾಸ್ಕೋ ಮತ್ತು ಕೀವ್‌ ನೇರ ಮಾತುಕತೆಗೆ ತೆರೆದುಕೊಂಡಿವೆ. ಆದರೆ ಇನ್ನೂ ನಿರ್ಣಾಯಕ ಪ್ರಗತಿ ಸಾಧಿಸಿಲ್ಲ.

ಹಲವು ಸಾವಿರ ಕಿಲೋಮೀಟರ್‌ ದೂರದಲ್ಲಿನ ರಷ್ಯಾದ ವಾಯುನೆಲೆಗಳಲ್ಲಿ ನಿಲುಗಡೆ ಮಾಡಿದ್ದ ಯುದ್ಧ ವಿಮಾನಗಳ ಮೇಲೆ ಡ್ರೋನ್‌ ಮೂಲಕ ದಾಳಿಮಾಡಿದ್ದ ಉಕ್ರೇನ್‌, ಅಪಾರ ಹಾನಿ ಮಾಡಿತ್ತು. ಅದರ ಬೆನ್ನಲ್ಲೇ ಎರಡೂ ದೇಶಗಳ ಮಧ್ಯೆ ಶಾಂತಿಗಾಗಿ ಮಾತುಕತೆ ನಡೆದಿದೆ.

ಎರಡೂ ರಾಷ್ಟ್ರಗಳ ಮಧ್ಯೆ ಕಳೆದ ತಿಂಗಳು ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಆ ಬಳಿಕ ದೊಡ್ಡ ಪ್ರಮಾಣದಲ್ಲಿ ಯುದ್ಧ ಕೈದಿಗಳ ವಿನಿಮಯ ನಡೆದಿತ್ತು. ಆದರೆ, ಉಭಯ ದೇಶಗಳ ನಡುವಿನ ಸಂಘರ್ಷ ಮುಂದುವರಿದಿತ್ತು.

ಸೋಮವಾರ ಇಸ್ತಾಂಬುಲ್‌ನಲ್ಲಿ ಮಾತುಕತೆ ಮುಕ್ತಾಯವಾದ ಬಳಿಕ ವಿಲಿನಿಯಸ್‌ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ‘ಟರ್ಕಿಯ ಮೂಲಕ ನಮ್ಮ ಯೋಜನೆಯನ್ನು ಹಂಚಿಕೊಂಡಿದ್ದೇವೆ. ಮತ್ತೊಂದು ಸುತ್ತಿನ ಯುದ್ಧ ಕೈದಿಗಳ ಬಿಡುಗಡೆಗೆ ನಾವು ಸಜ್ಜಾಗುತ್ತಿದ್ದೇವೆ’ ಎಂದರು.

‘ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಯಾವ ಕೀರ್ತಿಯೂ ಸಲ್ಲಬಾರದು. ಆತ ಒಬ್ಬ ಆಕ್ರಮಣಕಾರ’ ಎಂದು ಹೇಳಿದರು.

ಯಾವುದೇ ಷರತ್ತುಗಳಿಲ್ಲದ ಸಂಪೂರ್ಣ ಕದನ ವಿರಾಮ ಘೋಷಣೆಯಾದರೆ ಮಾತ್ರ ಮುಂದಿನ ದೀರ್ಘಾವಧಿಯ ಮಾತುಕತೆಗೆ ತಾನು ಸಿದ್ಧ ಎಂದು ಉಕ್ರೇನ್‌ ಹೇಳಿದೆ. ರಷ್ಯಾ ಈ ಬೇಡಿಕೆಯನ್ನು ನಿರಂತರವಾಗಿ ತಳ್ಳಿಹಾಕುತ್ತಾ ಬಂದಿದೆ.

‘ಸಂಘರ್ಷದ ಮೂಲ ಕಾರಣಕ್ಕೆ ಪರಿಹಾರ ಬೇಕಿದೆ. ಉಕ್ರೇನ್‌ ಸೇನೆಗೆ ನಿಯಂತ್ರಣ ಹೇರಬೇಕು. ಆ ರಾಷ್ಟ್ರವು ನ್ಯಾಟೊ ಒಕ್ಕೂಟ ಸೇರದಂತೆ ನಿರ್ಬಂಧ ಹೇರಬೇಕು. ಉಕ್ರೇನ್‌ನ ಭೌಗೋಳಿಕ ವ್ಯಾಪ್ತಿಗೆ ಗಣನೀಯವಾಗಿ ಮಿತಿ ಹೇರಬೇಕು’ ಎಂಬ ಬೇಡಿಕೆಗಳನ್ನು ರಷ್ಯಾ ಮುಂದಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.