ADVERTISEMENT

ಉಕ್ರೇನ್‌ಗೆ ಬೆಂಬಲಿಸುವ ಅಮೆರಿಕದ ನಿರ್ಧಾರದಿಂದ ಶಾಂತಿ ಮಾತುಕತೆಗೆ ಅಡ್ಡಿ: ರಷ್ಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2022, 10:18 IST
Last Updated 7 ಏಪ್ರಿಲ್ 2022, 10:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಸ್ಕೋ: ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಅಮೆರಿಕದ ನಿರ್ಧಾರವು ಶಾಂತಿ ಮಾತುಕತೆಗೆ ಅಡ್ಡಿಯುಂಟು ಮಾಡಿದೆ ಎಂದು ರಷ್ಯಾ ಗುರುವಾರ ಹೇಳಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌, ‘ಉಕ್ರೇನ್‌ಗೆ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ನೆರವನ್ನು ನೀಡುವುದಾಗಿ ಅಮೆರಿಕ ಹೇಳಿದೆ. ಈ ನಿರ್ಧಾರವು ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಶಾಂತಿ ಮಾತುಕತೆಗೆ ಅಡ್ಡಿಯುಂಟು ಮಾಡುತ್ತಿದೆ’ ಎಂದು ತಿಳಿಸಿದ್ದಾರೆ.

ಅಮೆರಿಕದ ನಿರ್ಧಾರವು ಶಾಂತಿ ಸ್ಥಾಪನೆಯ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ ಎಂದು ಪೆಸ್ಕೋವ್‌ ಹೇಳಿದ್ದಾರೆ.

ADVERTISEMENT

ಉಕ್ರೇನ್‌ನಲ್ಲಿ ನಾಗರಿಕರ ನರಮೇಧ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧ ತನಿಖೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ. ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಕ್ಕೆ ಅವರು ಒತ್ತಾಯಿಸಿದ್ದಾರೆ.

ಫೆಬ್ರುವರಿ 24ರಿಂದ ರಷ್ಯಾದ ಸೇನಾಪಡೆ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದ್ದು, ಎರಡೂ ಕಡೆಯ ಸಾವಿರಾರು ಸೈನಿಕರು ಮೃತಪಟ್ಟಿದ್ದಾರೆ. ಉಕ್ರೇನ್‌ನ ಹಲವು ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹಲವು ಸುತ್ತಿನ ಶಾಂತಿ ಮಾತುಕತೆಗಳು ವಿಫಲಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.