
ಪಾಮ್ ಬೀಚ್(ಅಮೆರಿಕ): ‘ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆ ಸಂಕೀರ್ಣವಾಗಿದೆ. ಆದರೆ, ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿ ಉಭಯ ದೇಶಗಳು ಹಿಂದೆಂದಿಗಿಂತಲೂ ಹೆಚ್ಚು ನಿಕಟವಾಗಿ ಚರ್ಚೆಯಲ್ಲಿ ತೊಡಗಿವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
ಶಾಂತಿ ಒಪ್ಪಂದ ಕುರಿತು ಚರ್ಚಿಸುವ ಸಂಬಂಧ ಫ್ಲಾರಿಡಾದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ನಡೆಸಿದ ಸಭೆ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಈ ವಿಷಯ ತಿಳಿಸಲಾಗಿದೆ.
‘ಟ್ರಂಪ್ ಅವರು ಕದನ ವಿರಾಮ ಒಪ್ಪಂದ ಕುರಿತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಎರಡೂವರೆ ಗಂಟೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದರೂ ಕೂಡ ಪುಟಿನ್ ಅವರು ಶಾಂತಿ ಬಯಸುತ್ತಾರೆ ಎಂಬ ವಿಶ್ವಾಸವನ್ನು ಟ್ರಂಪ್ ಸಭೆಯಲ್ಲಿ ವ್ಯಕ್ತಪಡಿಸಿದರು’ ಎಂದು ಪ್ರಕಟಣೆ ತಿಳಿಸಿದೆ.
ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್ ಹಾಗೂ ಝೆಲೆನ್‌ಸ್ಕಿ,‘ರಷ್ಯಾ ಜೊತೆಗೆ ಕದನ ವಿರಾಮ ಒಪ್ಪಂದ ಏರ್ಪಡುವುದು ಸೇರಿ ಹಲವು ವಿಚಾರಗಳು ಕುರಿತು ಚರ್ಚಿಸಲಾಯಿತು’ ಎಂದರು.
‘ಶಾಂತಿ ಒಪ್ಪಂದದ ಬಳಿಕವೂ ಉಕ್ರೇನ್‌ನ ಕೆಲ ಭಾಗಗಳನ್ನು ರಷ್ಯಾ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲಿದೆಯೇ?, ಭವಿಷ್ಯದಲ್ಲಿ ಮತ್ತೆ ದಾಳಿ ನಡೆಸುವುದಿಲ್ಲ ಎಂಬುದನ್ನು ರಷ್ಯಾ ಖಾತ್ರಿಪಡಿಸುವುದೇ? ಎಂಬುದು ಸೇರಿ ಹಲವು ವಿಚಾರಗಳು ಈಗಲೂ ಜಟಿಲವಾಗಿಯೇ ಉಳಿದಿವೆ’ ಎಂದು ಉಭಯ ನಾಯಕರು ಹೇಳಿದರು.
ಟ್ರಂಪ್ ಹಾಗೂ ಝೆಲೆನ್‌ಸ್ಕಿ ಅವರು ಸಭೆ ಬಳಿಕ, ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲಿಯೆನ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಬ್ರಿಟನ್ ಹಾಗೂ ಪೋಲೆಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದರು.
ರಷ್ಯಾ–ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗಾಣಿಸುವುದಕ್ಕೆ ಸಂಬಂಧಿಸಿ ಟ್ರಂಪ್ ಹಾಗೂ ಪುಟಿನ್ ಅವರು ಶೀಘ್ರವೇ ಮತ್ತೊಂದು ಸುತ್ತಿನ ಮಾತುಕತೆ ನಡೆಸುವರು ಎಂದು ವಿದೇಶಾಂಗ ವ್ಯವಹಾರಗಳ ಕುರಿತು ಪುಟಿನ್ ಸಲಹೆಗಾರ ಯುರಿ ಉಷಕೋವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.