ADVERTISEMENT

ನಮ್ಮ ನಾಗರಿಕರನ್ನು ಸೇನೆಗೆ ನೇಮಕ ಮಾಡಿಕೊಳ್ಳಬೇಡಿ: ರಷ್ಯಾಗೆ ನೇಪಾಳ ಮನವಿ

ಪಿಟಿಐ
Published 20 ಜನವರಿ 2024, 11:02 IST
Last Updated 20 ಜನವರಿ 2024, 11:02 IST
<div class="paragraphs"><p>ಉಕ್ರೇನ್‌ನಲ್ಲಿ ರಷ್ಯಾ ಸೇನಾ ಸಿಬ್ಬಂದಿ</p></div>

ಉಕ್ರೇನ್‌ನಲ್ಲಿ ರಷ್ಯಾ ಸೇನಾ ಸಿಬ್ಬಂದಿ

   

ರಾಯಿಟರ್ಸ್ ಚಿತ್ರ

ಕಠ್ಮಂಡು: ತನ್ನ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಂತೆ ಹಾಗೂ ಉಕ್ರೇನ್‌ನಲ್ಲಿ ರಷ್ಯಾ ಪರ ಹೋರಾಡುತ್ತಿರುವ ತನ್ನ ಪ್ರಜೆಗಳನ್ನು ವಾಪಸ್‌ ಕರೆತರಲು ನೆರವಾಗುವಂತೆ ನೇಪಾಳ ಸರ್ಕಾರವು ರಷ್ಯಾಗೆ ಮನವಿ ಮಾಡಿದೆ.

ADVERTISEMENT

ಉಕ್ರೇನ್‌ನಲ್ಲಿ ಆಕ್ರಮಣ ನಡೆಸುತ್ತಿರುವ ರಷ್ಯಾ ಸೇನೆಗೆ ನೇಪಾಳದ ಕನಿಷ್ಠ 200 ನಾಗರಿಕರು ಕಾನೂನುಬಾಹಿರವಾಗಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ 12 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಉಗಾಂಡದ ಕಂಪಾಲದಲ್ಲಿ ನಡೆಯುತ್ತಿರುವ ಆಲಿಪ್ತ ರಾಷ್ಟ್ರಗಳ ಸಮಾವೇಶದ ವೇಳೆ ರಷ್ಯಾ ವಿದೇಶಾಂಗ ಇಲಾಖೆಯ ಉಪ ಸಚಿವ ವೆರ್ಷಿನಿನ್‌ ಸೆರ್ಗೇ ವಸಿಲಿಯೆವಿಚ್‌ ಅವರೊಂದಿಗೆ ನೇಪಾಳ ವಿದೇಶಾಂಗ ಸಚಿವ ಎನ್‌.ಪಿ.ಸೌದ್‌ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೌದ್‌ ಅವರು, 'ನೇಪಾಳದ ನಾಗರಿಕರನ್ನು ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳದಿರಿ ಮತ್ತು ಈಗಾಗಲೇ ಸೇನೆಗೆ ಸೇರಿಕೊಂಡಿರುವವರನ್ನು ವಾಪಸ್‌ ಕರೆತರಲು ನೆರವು ನೀಡಿ' ಎಂದು ಕೋರಿದ್ದಾರೆ. ಸೌದ್‌ ಅವರ ಆಪ್ತ ಕಾರ್ಯದರ್ಶಿ ಈ ಮಾಹಿತಿ ನೀಡಿದ್ದಾರೆ.

'ಸಾಂಪ್ರಾದಾಯಿಕ ವ್ಯವಸ್ಥೆ ಹೊಂದಿರುವ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿ, ವಿದೇಶಿ ಸೇನೆಗಳಿಗೆ ನಮ್ಮ ನಾಗರಿಕರನ್ನು ಕಳುಹಿಸುವ ಯಾವುದೇ ನಿಯಮವನ್ನು ನೇಪಾಳ ಹೊಂದಿಲ್ಲ. ಹಾಗಾಗಿಯೇ, ನಮ್ಮ ನಾಗರಿಕರನ್ನು ನೇಮಕ ಮಾಡಿಕೊಳ್ಳದಂತೆ ರಷ್ಯಾ ಸಚಿವರಿಗೆ ತಿಳಿಸಿದ್ದೇವೆ' ಎಂದು ಸೌದ್‌ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ಹೋರಾಡುವ ವೇಳೆ ಮೃತಪಟ್ಟ ನೇಪಾಳ ನಾಗರಿಕರ ಶವಗಳನ್ನು ಕಳುಹಿಸಿಕೊಡುವಂತೆ ಮತ್ತು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆಯೂ ಸೆರ್ಗೇ ಅವರಿಗೆ ಹೇಳಲಾಗಿದೆ.

ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಕಲ್ಪಿಸಲು ರಷ್ಯಾ ಕಾನೂನಿನ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನೇಪಾಳದ ಕಳವಳ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಸೆರ್ಗೇ ತಿಳಿಸಿದ್ದಾರೆ.

ಇದೇ ವೇಳೆ, ಎರಡೂ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ವೃದ್ಧಿ ವಿಚಾರವಾಗಿ ಉಭಯ ನಾಯಕರು ಚರ್ಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.