ADVERTISEMENT

ಉಕ್ರೇನ್‌ ಮೇಲೆ ರಷ್ಯಾ ದಾಳಿ: ವಿಜಯದ ತುದಿಯಲ್ಲಿದ್ದೇವೆ ಎಂದ ಪುಟಿನ್‌

ಏಜೆನ್ಸೀಸ್
Published 8 ನವೆಂಬರ್ 2025, 15:22 IST
Last Updated 8 ನವೆಂಬರ್ 2025, 15:22 IST
   

ಕೀವ್‌: ಉಕ್ರೇನ್‌ನ ವಿವಿಧ ಪ್ರದೇಶಗಳ ಮೇಲೆ ರಷ್ಯಾದಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿ ಮುಂದುವರಿದಿದೆ. ಶನಿವಾರ ನಡೆದ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಶನಿವಾರ ಮುಂಜಾನೆ ಪೂರ್ವ ಉಕ್ರೇನ್‌ನ ಡ್ನಿಪ್ರೋ ನಗರದ ಅಪಾರ್ಟ್‌ಮೆಂಟ್‌ಗೆ ಡ್ರೋನ್‌ ದಾಳಿಯಿಂದ ಬೆಂಕಿ ಹೊತ್ತಿಕೊಂಡಿದೆ. ನಿದ್ರೆಯಲ್ಲಿದ್ದ ಮೂವರು ಸಾವಿಗೀಡಾಗಿ, 12 ಮಂದಿ ಗಾಯಗೊಂಡಿದ್ದಾರೆ. ಕಾರ್ಕೀವ್‌ನ ವಿದ್ಯುತ್‌ ಘಟಕಗಳ ಮೇಲೂ ದಾಳಿ ನಡೆದಿದ್ದು, ಕಾರ್ಮಿಕನೊಬ್ಬ ಜೀವಬಿಟ್ಟಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ 458 ಡ್ರೋನ್‌, 45 ಕ್ಷಿಪಣಿಗಳನ್ನು ಬಳಸಿತ್ತು. 406 ಡ್ರೋನ್‌, 9 ಕ್ಷಿಪಣಿಗಳನ್ನು ವಿಫಲಗೊಳಿಸಲಾಗಿದೆ. 25 ಪ್ರದೇಶಗಳ ಮೇಲೆ ದಾಳಿ ನಡೆದಿದೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ADVERTISEMENT

ಸೇನೆ ಮಾತ್ರ ಗುರಿ– ರಷ್ಯಾ ಸ್ಪಷ್ಟನೆ:

ರಷ್ಯಾ ನಿತ್ಯವೂ ದಾಳಿ ನಡೆಸಿ ನಾಗರಿಕರ ಹತ್ಯೆ ಮತ್ತು ಗಾಯಗೊಳಿಸುತ್ತಿದೆ ಎಂದು ಉಕ್ರೇನ್‌ ಆರೋಪಿಸುತ್ತಿದ್ದರೆ, ಸೇನಾ ನೆಲೆ ಮತ್ತು ಸೇನೆಗೆ ಇಂಧನ ಪೂರೈಸುವ ಘಟಕಗಳ ಮೇಲೆ ಮಾತ್ರ ದಾಳಿ ಮಾಡುತ್ತಿದ್ದೇವೆ ಎಂದು ರಷ್ಯಾ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ.

ಮತ್ತೊಂದೆಡೆ ರಷ್ಯಾದ ತೈಲ ಸಂಸ್ಕರಣಾ ಘಟಕಗಳನ್ನು ಗುರಿಯಾಗಿಸಿ ತಾನೂ ದಾಳಿ ಮಾಡುತ್ತಿರುವುದಾಗಿ ಉಕ್ರೇನ್‌ ಹೇಳಿಕೊಂಡಿದೆ. ಉಕ್ರೇನ್‌ನ ದಾಳಿಯಲ್ಲಿ ಸರಟೋವ್‌ನಲ್ಲಿ ಇಬ್ಬರಿಗೆ ಗಾಯಗಳಾಗಿವೆ. 82 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಇಲಾಖೆ ತಿಳಿಸಿದೆ. 

ವಿಜಯದ ಉತ್ತುಂಗದಲ್ಲಿದ್ದೇವೆ–ಪುಟಿನ್‌:

‘ಈ ಮಧ್ಯೆ ನಮ್ಮ ಪಡೆಗಳು ವಿಜಯದ ಉತ್ತುಂಗದಲ್ಲಿವೆ’ ಎಂದು ಘೋಷಿಸಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ‘ಆದರೂ ಶಾಂತಿ ಸ್ಥಾಪನೆಯ ಪೂರ್ವ ಷರತ್ತಾಗಿ ಡೋನ್‌ಬಾಸ್‌ ಪ್ರದೇಶವನ್ನು ಉಕ್ರೇನ್‌ ಬಿಟ್ಟುಕೊಡಬೇಕು. ಡೋನ್‌ಟೆಸ್ಕ್ ಮತ್ತು ಲುಹಾನ್‌ಸ್ಕ್‌ಗಳಿಂದ ಹಿಂದೆ ಸರಿಯಬೇಕು’ ಎಂದು ಹೇಳಿದ್ದಾರೆ.

ಉಕ್ರೇನ್‌ನ ಪೋಕ್ರೋವ್‌ಸ್ಕ್‌ ಮತ್ತು ಮಿರ್ನೋಹಾಡ್‌ ಪ್ರದೇಶಗಳನ್ನು ಸೇನೆ ಸುತ್ತುವರೆದಿದ್ದು, ತನ್ನ ವಶಕ್ಕೆ ಪಡೆಯಲಿದೆ ಎಂದು ರಷ್ಯಾ ರಕ್ಷಣಾ ಇಲಾಖೆ ಹೇಳಿಕೊಂಡಿದೆ. ಆದರೆ, ‘ಪರಿಸ್ಥಿತಿ ಆತಂಕಕಾರಿಯಾಗಿದ್ದರೂ ನಮ್ಮ ಹೋರಾಟ ಮುಂದುವರೆದಿದೆ’ ಎಂದು ಉಕ್ರೇನ್‌ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.